ದೆಹಲಿ: ಸುಪ್ರೀಂಕೋರ್ಟ್ ದೇಶದ ಮಹಿಳೆಯರಿಗೆ ಸಿಹಿಸುದ್ದಿ ನೀಡಿದೆ. ಇದು ಕೇವಲ ಒಂದು ಕ್ಷಣಕ್ಕೆ ಸಿಹಿ ನೀಡುವ ಸುದ್ದಿಯಲ್ಲ. ಮಹಿಳೆಯರ ಪಾಲಿನ ಅಚ್ಚೇ ದಿನ್. ಸೇನೆಯಂತಹ ದೈಹಿಕ ಸಾಮರ್ಥ್ಯ ಆಧರಿತ ಕೆಲಸಗಳಲ್ಲಿ ಪುರುಷರಂತೆಯೇ ಮಹಿಳೆಯರು ಸಹ ನಿವೃತ್ತಿಯವರೆಗೆ ಮುಂದುವರೆಯಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಸುಪ್ರೀಂಕೋರ್ಟ್ನ ಈ ದೈಹಿಕ ಸಾಮರ್ಥ್ಯದ ನೆಪವೊಡ್ಡಿ ಸೇನೆಗಳಲ್ಲಿ ಮುಂದುವರೆಯಲು ಆಗದ ಈವರೆಗಿನ ಕ್ರಮ ಇನ್ನುಮುಂದೆ ಸ್ಥಗಿತಗೊಳ್ಳಲಿದೆ. ಸಂವಿಧಾನದ ಆಶಯದಂತೆ ಮಹಿಳೆಯರಿಗೂ ದೇಶದ ನಾಗರಿಕರೆಲ್ಲರಿಗೂ ಅನ್ವಯವಾಗುವಂತೆ ಸಮಾನ ಅವಕಾಶ ಸಿಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ದೈಹಿಕ ಸಾಮರ್ಥ್ಯ ಆಧರಿಸಿದ ಕೆಲಸಗಳಲ್ಲೂ ಮಹಿಳೆ ಪುರುಷರಿಗೆ ಸರಿ ಸಮಾನರು ಎಂದು ಅಭಿಪ್ರಾಯಪಟ್ಟ ಕೋರ್ಟ್ ಈ ಆದೇಶ ನೀಡಿದೆ. ಈ ಆದೇಶದಿಂದ ಸೇನೆ, ನೌಕಾದಳಗಳಲ್ಲಿ ಮಹಿಳೆಯರು ಪುರುಷರಂತೆಯೇ ನಿವೃತ್ತಿಯವರೆಗೂ ಕರ್ತವ್ಯ ಸಲ್ಲಿಸಬಹುದಾಗಿದೆ. ಅಲ್ಲದೇ ಸೇನಾ ಮುಖ್ಯಸ್ಥರಂತಹ ಅತ್ಯುನ್ನತ ಹುದ್ದೆಗೂ ಮಹಿಳಾ ಅಧಿಕಾರಿಗಳು ನೇಮಕವಾಗಬಹುದಾಗಿದೆ.
ವಿವಿಧ ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಕೋರ್ಟ್, ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯ ಕೆಲಸ, ಕರ್ತವ್ಯ ಮತ್ತು ಜವಾಬ್ದಾರಿಗಳು ಬಹಳ ಮಹತ್ವವಾದದ್ದು. ಉದ್ಯೋಗದ ಜತೆಗೆ ಮನೆಗೆಲಸ, ಕುಟುಂಬದ ಜವಾಬ್ದಾರಿ ಮತ್ತು ಮಕ್ಕಳ ಲಾಲನೆ ಪಾಲನೆಯನ್ನು ಮಹಿಳೆ ನಿರ್ವಹಿಸುತ್ತಾಳೆ. ಇದು ಮಹಿಳೆಯ ಮೇಲೆ ಅತ್ಯಂತ ಹೆಚ್ಚಿನ ಒತ್ತಡ ಹಾಕುತ್ತದೆ. ಅಲ್ಲದೇ ಇಷ್ಟು ಜವಾಬ್ದಾರಿಗಳು ಬಹಳ ಕಷ್ಟಕರವೂ ಆಗಿದೆ ಎಂದು ಕೋರ್ಟ್ ಹೇಳಿದೆ. ದೇಶದ ಸೇನೆ ಮತ್ತು ನೌಕಾದಳಗಳಲ್ಲಿ ಮಹಿಳೆಯರನ್ನು ನಿವೃತ್ತಿಯವರೆಗೂ ಮುಂದುವರೆಯಲು ಅವಕಾಶ ನೀಡಬೇಕೆಂದು ಕೋರ್ಟ್ ಆದೇಶ ತಿಳಿಸಿದೆ.
ಕೇಂದ್ರ ಸರ್ಕಾರವು ಮಹಿಳೆಯರಿಗೆ ದೈಹಿಕ ಸಾಮರ್ಥ್ಯದ ಆಧಾರದ ಮೇಲಿನ ವೃತ್ತಿಗಳಲ್ಲಿ ಸಮಾನತೆಯ ಅವಕಾಶ ಒದಗಿಸುತ್ತಿಲ್ಲ. ಸರ್ಕಾರದ ಈ ನಿಲುವು ಸಂವಿಧಾನದಲ್ಲಿ ಹೇಳಲಾದ ಸಮಾನತೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದಿರುವ ಕೋರ್ಟ್, ಈ ಆದೇಶವನ್ನು ಮೂರು ತಿಂಗಳಲ್ಲಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದನ್ನೂ ಓದಿ:‘ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸುತ್ತೀರಿ?‘: ಸುಪ್ರೀಂಕೋರ್ಟ್
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಾಬಂಧನ ಕಟ್ಟಲು ಆದೇಶ; ಸ್ಟೀರಿಯೊಟೈಪ್ ಬಿಟ್ಟುಬಿಡಿ ಎಂದ ಸುಪ್ರೀಂಕೋರ್ಟ್