ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಾಬಂಧನ ಕಟ್ಟಲು ಆದೇಶ; ಸ್ಟೀರಿಯೊಟೈಪ್ ಬಿಟ್ಟುಬಿಡಿ ಎಂದ ಸುಪ್ರೀಂಕೋರ್ಟ್
ಆರೋಪಿಯು ಸಂತ್ರಸ್ತೆಯ ಮನೆಗೆ ಹೋಗಿ ರಕ್ಷಾಬಂಧನ ಕಟ್ಟಬೇಕು . ಇಷ್ಟೇ ಅಲ್ಲದೆ ಆ ಮಹಿಳೆಯನ್ನು ಸಹೋದರಿಯಂತೆ ಕಾಪಾಡಬೇಕು, ಆಕೆಗೆ ₹11,000 ನೀಡಬೇಕು. ಆ ಮಹಿಳೆಯ ಮಗನಿಗೆ 5000, ಹೊಸ ಬಟ್ಟೆ ಮತ್ತು ಸಿಹಿತಿಂಡಿ ಕೊಡಿಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿತ್ತು.
ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಾಬಂಧನ ಕಟ್ಟಲು ಆರೋಪಿಗೆ ಹೇಳಿರುವ ಮಧ್ಯ ಪ್ರದೇಶ ಹೈಕೋರ್ಟ್ನ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಪ್ರಸ್ತುತ ಪ್ರಕರಣದ ಬಗ್ಗೆ 9 ವಕೀಲೆಯರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ರೀತಿಯ ಪ್ರಕರಣದಲ್ಲಿ ರೂಢಿಗತ ಸಿದ್ಧ ಮಾದರಿಗಳನ್ನು (ಸ್ಟೀರಿಯೊಟೈಪ್) ಬಿಟ್ಟು ಬಿಡಬೇಕು ಎಂದು ಹೇಳಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿರುವುದನ್ನು ಪ್ರಶ್ನಿಸಿದ ನ್ಯಾಯವಾದಿಗಳು, ಈ ರೀತಿಯ ತೀರ್ಪುಗಳು ಮಹಿಳೆಯರನ್ನು ವಸ್ತುವಾಗಿ ಪರಿಗಣಿಸುತ್ತವೆ ಎಂದಿದ್ದಾರೆ.
ಉಜೈನ್ ಜೈಲಿನಲ್ಲಿದ್ದ ವಿಕ್ರಂ ಬಂಗ್ರಿ ಎಂಬಾತ 2020 ಏಪ್ರಿಲ್ ತಿಂಗಳಲ್ಲಿ ನೆರೆಮನೆಯ ಯುವತಿ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜಾಮೀನು ಕೋರಿ ಇಂದೋರ್ನಲ್ಲಿ ಮನವಿ ಸಲ್ಲಿಸಿದ್ದನು. ಜುಲೈ 30ರಂದು ಮಧ್ಯಪ್ರದೇಶದ ಹೈಕೋರ್ಟ್ನ ಇಂದೋರ್ ನ್ಯಾಯಪೀಠ ವಿಕ್ರಂಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆ ಷರತ್ತುಗಳ ಪೈಕಿ ಒಂದು ಷರತ್ತು ಆರೋಪಿಯು ಸಂತ್ರಸ್ತೆಯ ಮನೆಗೆ ಹೋಗಿ ರಕ್ಷಾಬಂಧನ ಕಟ್ಟಬೇಕು ಎಂಬುದಾಗಿತ್ತು. ಇಷ್ಟೇ ಅಲ್ಲದೆ ಆ ಮಹಿಳೆಯನ್ನು ಸಹೋದರಿಯಂತೆ ಕಾಪಾಡಬೇಕು, ಆಕೆಗೆ ₹11,000 ನೀಡಬೇಕು. ಆ ಮಹಿಳೆಯ ಮಗನಿಗೆ 5000, ಹೊಸ ಬಟ್ಟೆ ಮತ್ತು ಸಿಹಿತಿಂಡಿ ಕೊಡಿಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಇದೆಲ್ಲದರ ಫೋಟೊವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿತ್ತು.
ಮಹಿಳೆಯರ ವಿರುದ್ಧ ಪ್ರಕರಣಗಳನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ ಹೇಳಿದ್ದೇನು?
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡುವುದಾದರೆ, ಜಾಮೀನಿನ ಷರತ್ತು ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಂಪರ್ಕ ಸಾಧಿಸುವಂತೆ ಇರಬಾರದು. ಸಂತ್ರಸ್ತೆಗೆ ಆರೋಪಿಯಿಂದ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂಬ ಷರತ್ತನ್ನು ಆರೋಪಿಗೆ ನೀಡಬೇಕು ಎಂದು ಹೇಳಿದೆ .ಸಮಾಜದಲ್ಲಿರುವ ರೂಢಿಗತ ಸಿದ್ಧ ಮಾದರಿಗಳನ್ನು ಹೊರತು ಪಡಿಸಿ, ಸಿಆರ್ಪಿಸಿ ಅಡಿಯಲ್ಲಿಯೇ ಷರತ್ತುಬದ್ಧ ಜಾಮೀನು ನೀಡಬೇಕು. ಸಂತ್ರಸ್ತೆ ಮತ್ತು ಆರೋಪಿ ನಡುವೆ ಯಾವುದೇ ಸಂಧಾನ ಮಾಡಿಕೊಳ್ಳುವಂತೆ ಸಲಹೆ ಮಾಡಬಾರದು, ಜಾಮೀನಿನ ಷರತ್ತಿನಲ್ಲಿ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಂಪರ್ಕ ಸಾಧಿಸುವಂತೆ ಇರಬಾರದು. ಸಂತ್ರಸ್ತೆಗೆ ಆರೋಪಿಯಿಂದ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂಬ ಷರತ್ತನ್ನು ಆರೋಪಿಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ವಾದ ಗೆಲ್ಲಲ್ಲು ಮಗುವನ್ನು ದಾಳವಾಗಿ ಬಳಸಬೇಡಿ: ಸುಪ್ರೀಂಕೋರ್ಟ್ ವಿವಾಹ ವಿಚ್ಚೇದನದಲ್ಲಿ ಪರಸ್ಪರ ವಾದಿಸಿ ಗೆಲ್ಲಲು ಮಗುವನ್ನು ದಾಳವಾಗಿ ಬಳಸಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ವಿವಾಹ ವಿಚ್ಚೇದನ ಬಗ್ಗೆ ತೀರ್ಪು ನೀಡಿದ್ದ ಸುಪೀಂಕೋರ್ಟ್, ಪತಿ- ಪತ್ನಿ ವಿಚ್ಚೇದನ ನೀಡಿದ ನಂತರ ಪ್ರತ್ಯೇಕವಾಗಿ ಬದುಕಬಹುದು. ಆದರೆ ಇಬ್ಬರ ನಡುವಿನ ವಿವಾದದಲ್ಲಿ ಮಕ್ಕಳನ್ನು ಮಧ್ಯೆ ತರಬಾರದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಆರ್ ಸುಭಾಷ್ ರೆಡ್ಡಿಯವರ ನ್ಯಾಯಪೀಠ ಕಳೆದ ವಾರ ನೀಡಿದ ತೀರ್ಪಿನಲ್ಲಿ ಹೇಳಿದೆ.
ಈ ದಂಪತಿಯ ವಿವಾಹ ಸಂಬಂಧವು ಮುರಿದು ಬಿದ್ದಿದೆ .ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿವಾಹ ವಿಚ್ಚೇದನಕ್ಕೆ ಒಪ್ಪಿದ್ದಾರೆ. ಹಾಗಾಗಿ ನ್ಯಾಯಪೀಠ ವಿವಾಹ ವಿಚ್ಚೇದನವನ್ನು ಅಂಗೀಕರಿಸಿದೆ ಎಂದು ಹೇಳಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆಯಾಗಲಿ; ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಮನವಿ
ರೈತರ ಅಹವಾಲು ಆಲಿಸಲು ನೇಮಿಸಿದ್ದ ಸಮಿತಿಗೆ ಅವಹೇಳನ: ಸುಪ್ರೀಂಕೋರ್ಟ್ ಕೆಂಡಾಮಂಡಲ
Published On - 3:45 pm, Thu, 18 March 21