ನವದೆಹಲಿ, ಮಾರ್ಚ್ 4: ದೆಹಲಿ ಹೈಕೋರ್ಟ್ಗೆ ನೀಡಲಾಗಿರುವ ಜಾಗದಲ್ಲಿ ಪಕ್ಷದ ಕಚೇರಿ ಮಾಡಿಕೊಂಡಿರುವ ಆಮ್ ಆದ್ಮಿ ಪಕ್ಷ (Aam Aadmi party) ಈಗ ಅದನ್ನು ತೆರವುಗೊಳಿಸಬೇಕಾಗಿದೆ. ರೌಸ್ ಅವೆನ್ಯೂ ಪ್ರದೇಶದಲ್ಲಿರುವ ಈ ಕಚೇರಿಯನ್ನು ಜೂನ್ 15ರೊಳಗೆ ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿದೆ. ಇಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರಿರುವ ಸರ್ವೋಚ್ಚ ನ್ಯಾಯಪೀಠ ಇಂದು ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿತು. ಎಎಪಿ ಪಕ್ಷದ ಕಚೇರಿ ಸ್ಥಳವನ್ನು ಯಾವಾಗ ತೆರವುಗೊಳಿಸುತ್ತೀರಿ ಎಂದು ಕೇಳಿದಾಗ ಪಕ್ಷದ ವತಿಯಿಂದ 2-3 ತಿಂಗಳ ಕಾಲಾವಕಾಶ ಬೇಕೆಂದು ಕೋರಲಾಯಿತು. ಅದರಂತೆ ನ್ಯಾಯಾಲಯ ಜೂನ್ 15ರವರೆಗೆ ಕಾಲಾವಕಾಶ ಕೊಟ್ಟಿದೆ.
ಈಗ ಆಮ್ ಆದ್ಮಿ ಪಕ್ಷ ಬೇರೆ ಕಡೆ ಪಕ್ಷದ ಕಚೇರಿಗೆ ಸ್ಥಳ ಹುಡುಕಬೇಕಿದೆ. ಕೇಂದ್ರ ಸರ್ಕಾರಕ್ಕೆ ಸೇರಿದ ಭೂಮಿ ಮತ್ತು ಅಭಿವೃದ್ಧಿ ಕಚೇರಿ (ಎಲ್ಡಿಒ) ಬಳಿ ಎಎಪಿ ಹೊಸ ಕಚೇರಿ ಸ್ಥಳಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.
‘ನಾಲ್ಕು ವಾರದೊಳಗೆ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಲ್ಯಾಂಡ್ ಅಂಡ್ ಡೆವಲಪ್ಮೆಂಟ್ ಆಫೀಸ್ಗೆ ನಾವು ಮನವಿ ಮಾಡುತ್ತೇವೆ,’ ಎಂದು ಸುಪ್ರೀಂಕೋರ್ಟ್ ಇದೇ ವೇಳೆ ಹೇಳಿದೆ.
ಇದನ್ನೂ ಓದಿ: ಮಹಿಳೆಗೆ ಮಾಸಿಕ 1,000 ರೂ ಧನಸಹಾಯ; ಶಿಕ್ಷಣ ಕ್ಷೇತ್ರಕ್ಕೆ ಶೇ. 21ಕ್ಕಿಂತ ಹೆಚ್ಚು ಹಣ; ದೆಹಲಿ ಸರ್ಕಾರದ ಬಜೆಟ್ ಧಮಾಕ
ರೋಸ್ ಅವೆನ್ಯೂ ಪ್ರದೇಶದಲ್ಲಿರುವ ದೆಹಲಿ ಹೈಕೋರ್ಟ್ನ ಅಂಗಳದ ಬಳಿಯೇ ಎಎಪಿ ಪಕ್ಷದ ಕಚೇರಿ ಇದೆ. ಈ ಸ್ಥಳವನ್ನು ಹೈಕೋರ್ಟ್ಗೆ ಅಲಾಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೋರ್ಟ್ ವಿಚಾರಣೆ ವೇಳೆ, ಎಎಪಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಈ ಜಾಗವನ್ನು ಎಎಪಿ ಅತಿಕ್ರಮಿಸಿಕೊಂಡು ಕೂತಿಲ್ಲ ಎಂದು ವಾದಿಸಿದ್ದಾರೆ.
ಹೈಕೋರ್ಟ್ನ ವಿಸ್ತರಣೆಗೆ ಅಲಾಟ್ ಮಾಡುವ ಬಹಳ ಹಿಂದೆಯೇ ಎಎಪಿಗೆ ಈ ಸ್ಥಳ ಅಲಾಟ್ ಅಗಿದೆ ಎಂದು ಅಭಿಷೇಕ್ ಹೇಳಿದ್ದಾರೆ.
ಇದನ್ನೂ ಓದಿ: ಸತ್ತ ಪಾತಕಿಯ ಮಗಳ ಮದುವೆ ಮಾಡಿದ ಯುಪಿ ಪೊಲೀಸ್; ಎನ್ಕೌಂಟರ್ ಮಾಡಿದ್ದ ತಂಡದ ಸದಸ್ಯರಿಂದಲೇ ಮದುವೆ ಕಾರ್ಯ
ಬಿಜೆಪಿಗೆ ಇದೇ ಪ್ರದೇಶದಲ್ಲಿ ಕಚೇರಿ ಇದೆ. ಎಎಪಿಯೂ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಒಂದು. ಆದರೆ, ಬದರ್ಪುರ್ ಪ್ರದೇಶದಲ್ಲಿ ಕಚೇರಿ ಸ್ಥಾಪಿಸುವಂತೆ ತಮಗೆ ಹೇಳಲಾಗಿದೆ. ತಮಗೂ ದೆಹಲಿ ಮಧ್ಯ ಭಾಗದಲ್ಲಿ ಜಾಗ ಕೊಡಿಸಬೇಕು. ರೋಸ್ ಅವೆನ್ಯೂ ಪ್ರದೇಶದಲ್ಲೇ ಲ್ಯಾಂಡ್ ಅಂಡ್ ಡೆವಲಪ್ಮೆಂಟ್ ಆಫೀಸ್ ಎರಡು ಪ್ಲಾಟ್ ಹೊಂದಿದೆ. ಅದನ್ನು ಎಎಪಿಗೆ ನೀಡಬಹುದು ಎಂದು ಎಎಪಿ ಪರ ವಕೀಲರು ಕೇಳಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Mon, 4 March 24