ಕೊವಿಡ್ 19 ಲಸಿಕೆಗೆ ಬೆಲೆ ನಿಗದಿ ಮಾಡುವಲ್ಲಿ ಯಾವ ತಾರ್ಕಿಕ ಆಧಾರ ಅನ್ವಯಿಸಿದ್ದೀರಿ?-ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

|

Updated on: Apr 27, 2021 | 5:04 PM

ಕೇಂದ್ರ ಸರ್ಕಾರಕ್ಕೆ ಡ್ರಗ್ಸ್ ಕಂಟ್ರೋಲ್ ಕಾಯ್ದೆಯಡಿ ಇರುವ ಬೆಲೆ ನಿಯಂತ್ರಣ ಮತ್ತು ಪೇಟೆಂಟ್ಸ್ ಕಾಯ್ದೆಯಡಿ ಇರುವ ಶಾಶ್ವತ ಪರವಾನಗಿ ಅಧಿಕಾರದ ಬಗ್ಗೆ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಉಲ್ಲೇಖಿಸಿದ್ದಾರೆ.

ಕೊವಿಡ್ 19 ಲಸಿಕೆಗೆ ಬೆಲೆ ನಿಗದಿ ಮಾಡುವಲ್ಲಿ ಯಾವ ತಾರ್ಕಿಕ ಆಧಾರ ಅನ್ವಯಿಸಿದ್ದೀರಿ?-ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ
ಸುಪ್ರೀಂ ಕೋರ್ಟ್​
Follow us on

ಕೊವಿಡ್​ 19 ಲಸಿಕೆಗೆ ಯಾವ ತಾರ್ಕಿಕ ಆಧಾರದ ಮೇಲೆ ಬೆಲೆ ನಿಗದಿಪಡಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ದೇಶದಲ್ಲಿ ಕೊವಿಡ್​-19 ನಿಂದಾಗಿ ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ, ಸವಾಲುಗಳ ಬಗ್ಗೆ ಇಂದು ಸುಮೊಟೊ ವಿಚಾರಣೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಈ ಪ್ರಶ್ನೆ ಕೇಳಿದ ಸುಪ್ರೀಂಕೋರ್ಟ್, ಬೆಲೆ ನೀತಿ ಹಿಂದಿನ ಸಕಾರಣವನ್ನು ವಿವರಿಸುವಂತೆ ಸೂಚಿಸಿದೆ. ಕೊರೊನಾ ವ್ಯಾಕ್ಸಿನ್​ಗೆ ಬೆಲೆ ನಿಗದಿ ಮಾಡುವಾಗ ಅಳವಡಿಸಿಕೊಳ್ಳಲಾದ ನೀತಿಯ ಹಿಂದಿನ ನ್ಯಾಯಸಮ್ಮತ ಆಧಾರವನ್ನು ಒಂದು ಅಫಿಡಿವಿಟ್​ ಮೂಲಕ ಕೋರ್ಟ್​ಗೆ ಸಲ್ಲಿಸುವಂತೆ, ಡಿ.ವೈ. ಚಂದ್ರಚೂಡ್​, ಎಲ್. ನಾಗೇಶ್ವರ್ ರಾವ್​ ಮತ್ತು ಎಸ್​. ರವೀಂದ್ರ ಭಟ್ ಅವರನ್ನೊಳಗೊಂಡ ಪೀಠ ಕೇಂದ್ರಕ್ಕೆ ಆದೇಶ ನೀಡಿದೆ.

ಕೊವಿಡ್​ ಲಸಿಕೆ ಉತ್ಪಾದಕ ಕಂಪನಿಗಳು ಹೇರುತ್ತಿರುವ ವಿಭಿನ್ನ ಬೆಲೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರಿಂಕೋರ್ಟ್​, ಕೊವಿಡ್​ ಲಸಿಕೆಯನ್ನು ಹಲವು ಔಷಧೀಯ ಕಂಪನಿಗಳು ಉತ್ಪಾದಿಸುತ್ತವೆ. ಆದರೆ ಒಂದೊಂದು ಉತ್ಪಾದಕರು ಒಂದೊಂದು ಬೆಲೆ ಅಳವಡಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಎಂದು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್​ ಅವರು ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ ಬಳಿ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಡ್ರಗ್ಸ್ ಕಂಟ್ರೋಲ್ ಕಾಯ್ದೆಯಡಿ ಇರುವ ಬೆಲೆ ನಿಯಂತ್ರಣ ಮತ್ತು ಪೇಟೆಂಟ್ಸ್ ಕಾಯ್ದೆಯಡಿ ಇರುವ ಶಾಶ್ವತ ಪರವಾನಗಿ ಅಧಿಕಾರದ ಬಗ್ಗೆ ಉಲ್ಲೇಖಿಸಿದ ನ್ಯಾಯಮೂರ್ತಿ ಭಟ್​, ಸಾಂಕ್ರಾಮಿಕದ ಹೊತ್ತಲ್ಲಿ ಕೇಂದ್ರ ಸರ್ಕಾರ ಈ ಅಧಿಕಾರವನ್ನು ಬಳಸಬಹುದಾಗಿದೆ ಎಂದಿದ್ದಾರೆ. ಕೊರೊನಾ ಸಾಂಕ್ರಾಮಿಕ ಒಂದು ರಾಷ್ಟ್ರೀಯ ಬಿಕ್ಕಟ್ಟು. ಇಂಥ ಸನ್ನಿವೇಶದಲ್ಲೂ ನಿಮಗಿರುವ ಅಧಿಕಾರ ಬಳಸುವುದಿಲ್ಲವಾ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಲಸಿಕೆಗಗಳಿಗೆ ಬೆಲೆ ನಿಗದಿ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಆಯಾ ಉತ್ಪಾದಕರಿಗೇ ನೀಡಿದೆ. ಅದರ ಅನ್ವಯ ಕೊವಿಶೀಲ್ಡ್ ಲಸಿಕೆ ಉತ್ಪಾದನಾ ಕಂಪನಿ ಸೇರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ, ರಾಜ್ಯ ಸರ್ಕಾರಗಳಿಗೆ ಒಂದು ಡೋಸ್​ಗೆ 400 ರೂ.ಬೆಲೆ ನಿಗದಿ ಮಾಡಿದ್ದು, ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್​ಗೆ 600 ರೂ.ನಂತೆ ಮಾರಾಟ ಮಾಡುತ್ತಿದೆ. ಹಾಗೇ ಕೇಂದ್ರ ಸರ್ಕಾರ ಡೋಸ್​ಗೆ 150 ರೂ.ನಂತೆ ಕೊಳ್ಳುತ್ತಿದೆ. ಇನ್ನು ಕೊವ್ಯಾಕ್ಸಿನ್ ಉತ್ಪಾದಕ ಕಂಪನಿ ಭಾರತ್ ಬಯೋಟೆಕ್​, ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ ಒಂದು ಡೋಸ್​ಗೆ 600 ರೂ.ಗೆ ನೀಡುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್​ಗೆ 1200 ರೂ.ನಂತೆ ಮಾರಾಟ ಮಾಡುತ್ತಿದೆ. ಇದನ್ನೆಲ್ಲ ಉಲ್ಲೇಖಿಸಿದ ಸುಪ್ರೀಂಕೋರ್ಟ್, ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ನಿರ್ಧರಿಸಿದ್ದೀರಿ.. ಹಾಗಾಗಿ ಬೇಡಿಕೆ ತುಂಬ ಹೆಚ್ಚಲಿದೆ. ಇದನ್ನು ನಿಭಾಯಿಸಲು ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ ಎಂದು ಕೇಂದ್ರವನ್ನು ಪ್ರಶ್ನಿಸಿದೆ.

ಮುಂದಿನ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ನಿಗದಿಪಡಿಸಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಲಸಿಕೆಗೆ ಬೆಲೆ ನಿಗದಿ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಮುಂದಾಗಿರುವ ಕೇರಳ ಹೈಕೋರ್ಟ್, ಕೇಂದ್ರಕ್ಕೆ ನೋಟಿಸ್ ಕಳಿಸಿದೆ.

ಇದನ್ನೂ ಓದಿ:ನಟ ಕೋಮಲ್​ಗೆ ಕೊರೊನಾ; ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಜಗ್ಗೇಶ್​​

ಕೊರೊನಾ ಲಾಕ್​ಡೌನ್ ವೇಳೆ ಓಡಾಡುವವರು ಆಧಾರ್​ ತೋರಿಸಬೇಕು, ಮಾಸ್ಕ್​ ಧರಿಸದವರು ಸೂಪರ್​ ಸ್ಪ್ರೆಡರ್ಸ್​: ಬಾಂಬೆ ಹೈಕೋರ್ಟ್​