ದೆಹಲಿ: ವಿಚಾರಣೆ ನಡೆಸದೇ ಕಾರ್ಮಿಕನನ್ನು ಕೆಲಸದಿಂದ ವಜಾ ಮಾಡಿದರೂ, ಆಡಳಿತ ಮಂಡಳಿ ಅಥವಾ ಉದ್ಯೋಗದಾತರು ತಮ್ಮ ಕ್ರಮವನ್ನು ಕಾರ್ಮಿಕ ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಾದರೆ ಅಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕಾರ್ಮಿಕನನ್ನು ಕೆಲಸದಿಂದ ವಜಾ ಅಥವಾ ಕರ್ತವ್ಯದಿಂದ ಬಿಡುಗಡೆ ಮಾಡುವ ಮೊದಲು ವಿಚಾರಣೆ ನಡೆಸಲು ಸಾಧ್ಯವಾಗದಿದ್ದರೂ ಉದ್ಯೋಗದಾತರು ತಮ್ಮ ನಿರ್ಧಾರಕ್ಕೆ ಪೂರಕವಾದ ಪುರಾವೆಗಳನ್ನು ಕಾರ್ಮಿಕ ನ್ಯಾಯಾಲಯಗಳಿಗೆ ಸಲ್ಲಿಸಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹರಿದ್ವಾರದ ಜೈ ಭಾರತ್ ಜೂನಿಯರ್ ಹೈಸ್ಕೂಲ್ನ ಸಹಶಿಕ್ಷಕಿಯೊಬ್ಬರು ಸತತವಾಗಿ ಕರ್ತವ್ಯಕ್ಕೆ ಗೈರುಹಾಜರಾದ ಕಾರಣ ಆಡಳಿತ ಮಂಡಳಿಯು ಅವರನ್ನು ಕೆಲಸದಿಂದ ವಜಾ ಮಾಡಿತ್ತು. ಬಳಿಕ, ಕೆಲಸದಿಂದ ವಜಾಗೊಂಡ ಶಿಕ್ಷಕಿಯ ವಿರುದ್ಧದ ಆರೋಪಕ್ಕೆ, ಶಾಲಾ ಆಡಳಿತ ಮಂಡಳಿಯ ಬಳಿ ಸೂಕ್ತ ಸಾಕ್ಷ್ಯಾಧಾರಗಳು ಇದ್ದುದರಿಂದ ಕಾರ್ಮಿಕ ನ್ಯಾಯಾಲಯವು ಸಹಶಿಕ್ಷಕಿಗೆ ಯಾವುದೇ ಪರಿಹಾರ ನೀಡುವಂತೆ ಶಾಲೆಗೆ ಆದೇಶಿಸಿರಲಿಲ್ಲ.
ಬಳಿಕ, ಕಾರ್ಮಿಕ ನ್ಯಾಯಾಲಯದ ತೀರ್ಪಿಗೆ ಪ್ರತಿಯಾಗಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತ್ತು. ಕೆಲಸಗಾರನ ಅಮಾನತಿನಲ್ಲಿ ಯಾವುದೇ ತನಿಖೆ, ವಿಚಾರಣೆಗಳು ನಡೆದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಯಿತು.
ಈ ಅಹವಾಲಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ನವೀನ್ ಸಿನ್ಹಾ ಹಾಗೂ ಇಂದು ಮಲ್ಹೋತ್ರಾ ನೇತೃತ್ವದ ನ್ಯಾಯಪೀಠವು ಕಾರ್ಮಿಕ ನ್ಯಾಯಾಲಯವು ಇಬ್ಬರು ಕಕ್ಷಿದಾರರಿಗೆ ತಮ್ಮ ಸಾಕ್ಷಿ ಹಾಗೂ ದಾಖಲೆಗಳನ್ನು ಸಲ್ಲಿಸಲು ಮತ್ತು ವಿವರಿಸಲು ಪೂರ್ಣ ಅವಕಾಶವನ್ನು ನೀಡಿತ್ತು ಎಂದು ಅಭಿಪ್ರಾಯಪಟ್ಟಿತು. ಕಾರ್ಮಿರನ್ನು ವಜಾ ಮಾಡಲು ವಿಚಾರಣೆ ಪ್ರಕ್ರಿಯೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿ, ಅದಕ್ಕೆ ಪೂರಕವಾಗಿ ಹಿಂದಿನ ಕೆಲ ತೀರ್ಪುಗಳನ್ನೂ ಪ್ರಸ್ತಾಪಿಸಿತು.
ಧಾರವಾಡ ಅಪಘಾತದ ಬಗ್ಗೆ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಮಿತಿ ಸೂಚನೆ
Published On - 9:06 pm, Sun, 24 January 21