ದೆಹಲಿ: ಬಲವಂತದ ಧಾರ್ಮಿಕ ಮತಾಂತರವು ರಾಷ್ಟ್ರೀಯ ಸುರಕ್ಷತೆ, ಧರ್ಮದ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದು. ಇದು ಬಹಳ ಗಂಭೀರ ಸಮಸ್ಯೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಇಂತಹ ಬಲವಂತದ ಮತಾಂತರಗಳನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.
ಏನಿದು ಪ್ರಕರಣ?
ನ್ಯಾಯಾಧೀಶರಾದ ಎಂಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆ ನಡೆಸುತ್ತಿದೆ, ಬೆದರಿಕೆಯ ಮೂಲಕ ಮತ್ತು ಉಡುಗೊರೆಗಳು ಮತ್ತು ವಿತ್ತೀಯ ಪ್ರಯೋಜನಗಳ ಮೂಲಕ ಜನರನ್ನು ಆಮಿಷವೊಡ್ಡುವ ಮೂಲಕ ನಡೆಸಲಾಗುವ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನಗಳನ್ನು ಕೋರಿದೆ.
ಇಂತಹ ಬಲವಂತದ ಧಾರ್ಮಿಕ ಮತಾಂತರವನ್ನು ಅತ್ಯಂತ ಗಂಭೀರ ವಿಷಯ ಎಂದು ಕರೆದ ಪೀಠ, ಪರಿಸ್ಥಿತಿ ಕಷ್ಟಕರವಾಗುವ ಮುನ್ನವೇ ಅವುಗಳನ್ನು ತಡೆಯಲು ಕೇಂದ್ರ ಮುಂದಾಗಬೇಕು ಎಂದು ಹೇಳಿದೆ.
ಬಲವಂತದ ಮತಾಂತರವು ರಾಷ್ಟ್ರದ ಭದ್ರತೆಯ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಬಲವಂತದ ಮತಾಂತರವನ್ನು ನಿಲ್ಲಿಸಲು ಕೇಂದ್ರವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿದರೆ ಉತ್ತಮ ಎಂದು ನ್ಯಾಯಮೂರ್ತಿ ಎಂಆರ್ ಶಾ ಹೇಳಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 28 ರಂದು ನಿಗದಿಪಡಿಸಲಾಗಿದೆ.
Published On - 4:26 pm, Mon, 14 November 22