Kanwar Yatra 2021: ಕನ್ವರ್ ಯಾತ್ರೆಗೆ ಅವಕಾಶ ಕೊಟ್ಟ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಿಂದ ನೋಟಿಸ್​..

ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಿಂದ ನೋಟಿಸ್ ಬಂದಿದ್ದು ಮಾಧ್ಯಮಗಳಿಂದ ಗೊತ್ತಾಗಿದೆ. ಆ ನೋಟಿಸ್​ ಸಂಬಂಧಪಟ್ಟ ಅಧಿಕಾರಿಗೆ ಬಂದು ತಲುಪಿದ ನಂತರ ನಾವದಕ್ಕೆ ನಿರ್ದಿಷ್ಟ ಸಮಯದಲ್ಲಿ ಉತ್ತರ ನೀಡುತ್ತೇವೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್​ ಸೆಹಗಲ್​ ತಿಳಿಸಿದ್ದಾರೆ.

Kanwar Yatra 2021: ಕನ್ವರ್ ಯಾತ್ರೆಗೆ ಅವಕಾಶ ಕೊಟ್ಟ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಿಂದ ನೋಟಿಸ್​..
ಕನ್ವರ್ ಯಾತ್ರೆಯ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jul 14, 2021 | 2:34 PM

ಕೊವಿಡ್​ 19 (Covid 19) ಸಾಂಕ್ರಾಮಿಕ ಇನ್ನೂ ಪೂರ್ತಿಯಾಗಿ ನಿರ್ಮೂಲನೆಗೊಂಡಿಲ್ಲ.. ಹೀಗಿದ್ದಾಗ್ಯೂ ಕನ್ವರ್​ ಯಾತ್ರೆ (Kanwar Yatra 2021) ಗೆ ಹೇಗೆ ಅವಕಾಶ ಕೊಟ್ಟಿರಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೋಟಿಸ್​ ನೀಡಿದೆ. ಹಾಗೇ, ಕೇಂದ್ರ ಸರ್ಕಾರಕ್ಕೂ ನೋಟಿಸ್​ ನೀಡಿದೆ. ಜುಲೈ 25ರಿಂದ ಪ್ರಾರಂಭವಾಗುವ ಕನ್ವರ್​ ಯಾತ್ರೆಗೆ ಅವಕಾಶ ನೀಡಲು ಉತ್ತರಪ್ರದೇಶ ಸರ್ಕಾರ (Uttar Pradesh Government) ನಿರ್ಧರಿಸಿತ್ತು. ಇದನ್ನು ಸುಪ್ರೀಂಕೋರ್ಟ್ (Supreme Court​ ಸುಮೊಟೊ ವಿಚಾರಣೆಗೆ ಎತ್ತಿಕೊಂಡಿದೆ. ಕುಂಭಮೇಳದಿಂದ ಕೆಟ್ಟ ಅನುಭವ ಪಡೆದ ಉತ್ತರಾಖಂಡ ಕನ್ವರ್​ ಯಾತ್ರೆಯನ್ನು ನಿಷೇಧಿಸಿದೆ. ಆದರೆ ಉತ್ತರ ಪ್ರದೇಶ ಸರ್ಕಾರ ಯಾತ್ರೆಗೆ ಅವಕಾಶ ನೀಡುವುದಾಗಿ ಹೇಳಿದೆ. ಈ ಬಗ್ಗೆ ನಾವು ಇಂಡಿಯನ್​ ಎಕ್ಸ್​ಪ್ರೆಸ್​ ಮಾಧ್ಯಮದಲ್ಲಿ ಸುದ್ದಿ ಓದಿ, ಸ್ವಲ್ಪ ಗೊಂದಲಗೊಂಡಿದ್ದೇವೆ ಯಾವ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್​.ಎಫ್​.ನಾರಿಮನ್​​ ಅವರು ಸಾಲಿಸಿಟರ್ ಜನರಲ್​​ರನ್ನು ಪ್ರಶ್ನೆ ಮಾಡಿದ್ದಾರೆ.

ಕನ್ವರ್​ ಯಾತ್ರೆ ಹಿಂದುಗಳ ಪವಿತ್ರ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ. ಶಿವನ ಭಕ್ತರು ಗಂಗಾ ನದಿಯಿಂದ ನೀರು ಸಂಗ್ರಹಿಸಿ ಅದನ್ನು ಆಯಾ ರಾಜ್ಯಗಳ ಶಿವನ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ನೂರಾರು ಕಿಮೀ ದೂರ ಕಾಲ್ನಡಿಗೆಯಲ್ಲೇ ಸಂಚರಿಸಿ ಹೋಗಿ ನೀರು ಸಂಗ್ರಹಿಸುವ ಈ ಭಕ್ತರನ್ನು ಕನ್ವರಿಯಾಸ್​ ಎಂದು ಕರೆಯುತ್ತಾರೆ. ಹೀಗೆ ಗಂಗಾ ನದಿ ನೀರು ಸಂಗ್ರಹಕ್ಕೆ ಹೆಚ್ಚೆಚ್ಚು ಜನ ಸೇರುವುದಿಂದ ಕೊವಿಡ್​ 19 ಸೋಂಕು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಕನ್ವರ್​ ಯಾತ್ರೆಯೆಂದಲ್ಲ, ಜನರು ಸೇರುವ ಯಾವುದೇ ಉತ್ಸವ, ಯಾತ್ರೆ, ಮೇಳಗಳು ಕೊವಿಡ್ 19 ಮೂರನೇ ಅಲೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾಗ್ಯೂ ಉತ್ತರ ಪ್ರದೇಶ ಸರ್ಕಾರ ಕನ್ವರ್​ ಯಾತ್ರೆಗೆ ಅವಕಾಶ ನೀಡಿದ್ದಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಿಂದ ನೋಟಿಸ್ ಬಂದಿದ್ದು ಮಾಧ್ಯಮಗಳಿಂದ ಗೊತ್ತಾಗಿದೆ. ಆ ನೋಟಿಸ್​ ಸಂಬಂಧಪಟ್ಟ ಅಧಿಕಾರಿಗೆ ಬಂದು ತಲುಪಿದ ನಂತರ ನಾವದಕ್ಕೆ ನಿರ್ದಿಷ್ಟ ಸಮಯದಲ್ಲಿ ಉತ್ತರ ನೀಡುತ್ತೇವೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್​ ಸೆಹಗಲ್​ ತಿಳಿಸಿದ್ದಾರೆ. ಯಾತ್ರೆ ಶುರುವಾಗುವುದು ಜು.25ರಿಂದ. ಸಾಕಷ್ಟು ಸಮಯವಿದೆ..ಸುಪ್ರೀಂಕೋರ್ಟ್ ನೋಟಿಸ್​ ಬಗ್ಗೆ ರಾಜ್ಯ ಸರ್ಕಾರ ಖಂಡಿತ ಗಮನಹರಿಸುತ್ತದೆ ಎಂದೂ ತಿಳಿಸಿದ್ದಾರೆ. ಕನ್ವರ್ ಯಾತ್ರೆಯಿಂದ ಹರಿದ್ವಾರ, ಮುಜಾಫರ್​ನಗರ, ಬಾಗಪತ್, ಮೀರತ್, ಗಾಜಿಯಾಬಾದ್, ಬುಲಂದ್‌ಶಹರ್, ಹಾಪುರ್, ಅಮ್ರೋಹಾ, ಶಾಮ್ಲಿ, ಸಹರಾನ್‌ಪುರ, ಆಗ್ರಾ, ಅಲಿಗಡ್​, ಬರೇಲಿ, ಖೇರಿ, ಬರಾಬಂಕಿ, ಅಯೋಧ್ಯೆ, ವಾರಣಾಸಿ, ಬಸ್ತಿ ಸೇರಿ ಹಲವು ಕಡೆಗಳಲ್ಲಿ ಸಿಕ್ಕಾಪಟೆ ಜನರು ಸೇರುತ್ತಾರೆ. ಟ್ರಾಫಿಕ್​ ಜಾಮ್​ ಉಂಟಾಗುತ್ತದೆ. 2019ರಲ್ಲಿ ನಡೆದ ಕನ್ವರ್ ಯಾತ್ರೆಯಲ್ಲಿ ಬರೋಬ್ಬರಿ 3.5 ಕೋಟಿ ಭಕ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ನೀಲಿ ಕಲರ್​ ಸ್ಕರ್ಟ್​​ ತೊಟ್ಟ ಮಹಿಳೆಯ ಆಕೃತಿ; ಮಟ ಮಟ ಮಧ್ಯಾಹ್ನವೇ ಭಯಗೊಂಡ ನೆಟ್ಟಿಗರು! ವಿಡಿಯೋ ವೈರಲ್

Supreme Court issues notice to Uttar Pradesh and Centre for decision to allow the devotees to Kanwar Yatra