ಎಲ್ಲ ಶಾಲೆಗಳಲ್ಲಿ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವುದು ಕಡ್ಡಾಯ; ಸುಪ್ರೀಂ ಕೋರ್ಟ್ ಆದೇಶ
ಮುಟ್ಟಿನ ಆರೋಗ್ಯದ ಹಕ್ಕು ಕೂಡ ಮೂಲಭೂತ ಹಕ್ಕಿನ ಭಾಗ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಶಾಲೆಗಳಲ್ಲಿ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಋತುಚಕ್ರದ ವೇಳೆ ಅನೈರ್ಮಲ್ಯದ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಲು ಹಾಗೂ ಮುಟ್ಟಿನ ವೇಳೆ ಶಾಲೆಗೆ ಬಾರದಿರುವ ಹೆಣ್ಣುಮಕ್ಕಳ ಸಮಸ್ಯೆಯನ್ನು ದೂರ ಮಾಡಲು ಸುಪ್ರೀಂ ಕೋರ್ಟ್ ಈ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಈ ಆದೇಶ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲದೆ ಖಾಸಗಿ ಶಾಲೆಗಳಿಗೂ ಅನ್ವಯವಾಗುತ್ತದೆ.

ನವದೆಹಲಿ, ಜನವರಿ 30: ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಂದರ್ಭದಲ್ಲಿ ಜೈವಿಕವಾಗಿ ವಿಘಟನೀಯ (ಬಳಸಿ ಬಿಸಾಡುವ) ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ (Supreme Court) ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜೀವನದ ಮೂಲಭೂತ ಹಕ್ಕಿನ ಒಂದು ಭಾಗವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ನ್ಯಾಯಪೀಠವು ಎಲ್ಲಾ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಬೇಕೆಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಸರ್ಕಾರಿ ಸ್ವಾಮ್ಯದ್ದಾಗಿರಲಿ ಅಥವಾ ಸರ್ಕಾರದ ನಿಯಂತ್ರಣದಲ್ಲಿರಲಿ ಎಲ್ಲ ಶಾಲೆಗಳೂ ಅಂಗವಿಕಲ ಸ್ನೇಹಿ ಶೌಚಾಲಯಗಳನ್ನು ಒದಗಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಅವಹೇಳನ ಸರಿಯಲ್ಲ; ನಿವೃತ್ತ ನ್ಯಾಯಮೂರ್ತಿಗಳಿಂದ ಸಹಿ ಅಭಿಯಾನ
“ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮುಟ್ಟಿನ ಆರೋಗ್ಯದ ಹಕ್ಕು ಬದುಕುವ ಹಕ್ಕಿನ ಭಾಗವಾಗಿದೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದುವೇಳೆ ಖಾಸಗಿ ಶಾಲೆಗಳು ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಒದಗಿಸದಿದ್ದರೆ ಅವುಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ. ಒಂದುವೇಳೆ ಬಾಲಕಿಯರಿಗೆ ಶೌಚಾಲಯ ಮತ್ತು ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ವಿಫಲವಾದರೆ ಅದಕ್ಕೆ ಸರ್ಕಾರಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಪಾಲಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
6ರಿಂದ 12ನೇ ತರಗತಿಯ ಹದಿಹರೆಯದ ಬಾಲಕಿಯರಿಗೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕೇಂದ್ರ ಸರ್ಕಾರದ ‘ಶಾಲಾ ಬಾಲಕಿಯರಿಗೆ ಮುಟ್ಟಿನ ನೈರ್ಮಲ್ಯ ನೀತಿ’ಯನ್ನು ಭಾರತಾದ್ಯಂತ ಜಾರಿಗೆ ತರುವಂತೆ ಕೋರಿ ಜಯಾ ಠಾಕೂರ್ ಅವರು 2024ರ ಡಿಸೆಂಬರ್ 10ರಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಆದರೆ, ಈ ಪ್ರಕರಣದ ತೀರ್ಪನ್ನು ಇನ್ನೂ ಕಾಯ್ದಿರಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Fri, 30 January 26
