ಬಗೆಹರಿದ ಅಯೋಧ್ಯೆ ಭೂ ವಿವಾದ: ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಸಮ್ಮತಿ

ಬಗೆಹರಿದ ಅಯೋಧ್ಯೆ ಭೂ ವಿವಾದ: ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಸಮ್ಮತಿ

ದೆಹಲಿ: ದಶಕಗಳಿಂದ ಕಾನೂನು ಕಗ್ಗಂಟಾಗಿದ್ದ ರಾಮಜನ್ಮ ಭೂಮಿ ಅಯೋಧ್ಯೆ ಭೂ ವಿವಾದ ಕುರಿತಾದ ಸುಪ್ರೀಂಕೋರ್ಟ್​ ತೀರ್ಪು ಹೊರಬಿದ್ದಿದೆ. ‘‘ಶ್ರೀರಾಮನ ಜನ್ಮ ಭೂಮಿ ಇದಾಗಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬಹುದು’’ ಎಂದು ಸುಪ್ರೀಂಕೋರ್ಟ್​ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸರ್ವಾನುಮತದ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಸುನ್ನಿ ವಕ್ಫ್​ ಮಂಡಳಿ, ಶಿಯಾ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ವಿರಾಜಮಾನ್ ನಡುವಿನ 2.77 ಎಕರೆ ಭೂ ವಿವಾದ ಬಗೆಹರಿದಿದೆ.

ವಿವಾದಿತ ಜಮೀನು ರಾಮಲಲ್ಲಾ ಪಾಲು: ರಾಮಲಲ್ಲಾ ವಾದ ಎತ್ತಿ ಹಿಡಿದ ಕೋರ್ಟ್, ರಾಮಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕು. ರಾಮಮಂದಿರ ನಿರ್ಮಾಣದ ಹೊಣೆ ಕೇಂದ್ರ ಸರ್ಕಾರಕ್ಕೆ ವಹಿಸಲಾಗಿದೆ. ರಾಮಜನ್ಮ ಭೂಮಿಯ ಸ್ವಾಧೀನವನ್ನ ಟ್ರಸ್ಟ್​ಗೆ ನೀಡಬೇಕು ಎಂದು ಕೋರ್ಟ್​ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇದೇ ವೇಳೆ, ಸುನ್ನಿ ವಕ್ಫ್​ಬೋರ್ಡ್​ಗೆ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕು. ವಿಶೇಷ ಅಧಿಕಾರ ಬಳಸಿ ಸುನ್ನಿ ವಕ್ಫ್ ಬೋರ್ಡ್​ಗೆ ಜಮೀನು ನೀಡಬೇಕು. ಕೇಂದ್ರ ಸರ್ಕಾರ 3 ತಿಂಗಳ ಒಳಗಾಗಿ ಪರ್ಯಾಯ ಜಮೀನು ಹಂಚಿಕೆ ಬಗ್ಗೆ ಯೋಜನೆ ರೂಪಿಸಬೇಕು ಎಂದೂ ಸುಪ್ರೀಂಕೋರ್ಟ್​ ಸೂಚಿಸಿದೆ.

ಅಯೋಧ್ಯೆ ಭೂವಿವಾದ ಬಗ್ಗೆ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾ.ಶರದ್ ಅರವಿಂದ್ ಬೋಬ್ಡೆ, ನ್ಯಾ.ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾ. ಅಬ್ದುಲ್ ನಜೀರ್ ಅವರ ನ್ಯಾಯಪೀಠ ತೀರ್ಪು ನೀಡಿದೆ.

Published On - 11:09 am, Sat, 9 November 19

Click on your DTH Provider to Add TV9 Kannada