
ನವದೆಹಲಿ, ಮೇ 27: ಕರ್ನಾಟಕ, ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅಚ್ಚರಿ ಮೂಡಿಸಿದೆ. ಬಿಹಾರದಲ್ಲಿ ಭಾರತೀಯ ಚುನಾವಣಾ ಆಯೋಗ (ECI) ನಡೆಸಿದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಸಂಪೂರ್ಣವಾಗಿ ಸಾಂವಿಧಾನಿಕ ಮತ್ತು ಕಾನೂನುಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಶೇಷ ಪರಿಷ್ಕರಣೆ ನಡೆಸುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನು ಪ್ರಕಟಿಸಿದೆ.
ಸಂವಿಧಾನದ 324 ನೇ ವಿಧಿ ಮತ್ತು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಇಂತಹ ವಿಶೇಷ ಪರಿಷ್ಕರಣೆ ನಡೆಸುವ ಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ.ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಆಯೋಗದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಅದಕ್ಕಾಗಿ ಮತದಾರರ ಪಟ್ಟಿಯನ್ನು ನವೀಕರಿಸುವುದು ಅತ್ಯಗತ್ಯ.
ಈ ವಿಶೇಷ ಪರಿಷ್ಕರಣೆಯು ನಿಯಮಿತವಾಗಿ ನಡೆಯುವ ಸಾಮಾನ್ಯ ಪ್ರಕ್ರಿಯೆಗಿಂತ ಭಿನ್ನವಾಗಿದೆ ಎಂಬ ಒಂದೇ ಕಾರಣಕ್ಕೆ ಇದನ್ನು ಕಾನೂನುಬಾಹಿರ ಎಂದು ರದ್ದುಗೊಳಿಸಲು ಸಾಧ್ಯವಿಲ್ಲ. ಆಯೋಗವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಮತ್ತಷ್ಟು ಓದಿ: ಎಸ್ಐಆರ್ನಲ್ಲಿ ಅತಿ ಹೆಚ್ಚು ಮತದಾರರು ಡಿಲೀಟ್ ಆಗಿದ್ದ ಕ್ಷೇತ್ರಗಳಲ್ಲಿ ಟಿಎಂಸಿ ಪ್ರದರ್ಶನ ಹೇಗಿತ್ತು?
ಪ್ರಕರಣದ ಹಿನ್ನೆಲೆ ಮತ್ತು ಅರ್ಜಿಗಳಲ್ಲೇನಿತ್ತು?
ಚುನಾವಣಾ ಆಯೋಗದ ಈ ಬೃಹತ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಷ್ಟು ದೊಡ್ಡ ಪ್ರಮಾಣದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಲು ಆಯೋಗಕ್ಕೆ ಶಾಸನಬದ್ಧ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ಪ್ರಕರಣದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಆಗಸ್ಟ್ 12 ರಂದೇ ಆರಂಭಿಸಿತ್ತು.
ಈ ವಿಶೇಷ ಪರಿಷ್ಕರಣೆಯ (SIR) ಭಾಗವಾಗಿ, ಬಿಹಾರದ ಕರಡು ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ನಕಲಿ ಅಥವಾ ಅಸಿಂಧು ಹೆಸರುಗಳನ್ನು ಚುನಾವಣಾ ಆಯೋಗವು ತೆಗೆದುಹಾಕಿತ್ತು. ಅಧಿಸೂಚನೆಯ ಪ್ರಕಾರ, 2002 ಅಥವಾ 2003 ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು, ಆ ಪಟ್ಟಿಯಲ್ಲಿರುವ ವ್ಯಕ್ತಿಗಳೊಂದಿಗೆ ತಮ್ಮ ಪೂರ್ವಜರ ಸಂಪರ್ಕವನ್ನು ಸಾಬೀತುಪಡಿಸಬೇಕಾಗಿತ್ತು.
ಆದರೆ, ಈಗ ಸುಪ್ರೀಂ ಕೋರ್ಟ್ ಈ ಇಡೀ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಎಂದು ಘೋಷಿಸಿರುವುದರಿಂದ ಚುನಾವಣಾ ಆಯೋಗದ ಕ್ರಮಕ್ಕೆ ಸುಪ್ರೀಂ ಮುದ್ರೆ ಬಿದ್ದಂತಾಗಿದೆ.
ಕರ್ನಾಟಕದಲ್ಲೂ ವಿರೋಧ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಬಡವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಕಡಿತಗೊಳಿಸುವ ಹುನ್ನಾರ ಎಂದು ಆರೋಪಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇದರ ವಿರುದ್ಧ ತಾರ್ಕಿಕ ಹಾಗೂ ಕಾನೂನು ಸಮರ ನಡೆಸುತ್ತಲೇ ಇದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಎಸ್‌ಐಆರ್ ಪ್ರಕ್ರಿಯೆಯು ಬಡವರ ಮತಕ್ಕೆ ಕತ್ತರಿ ಹಾಕುವ ತಂತ್ರವಾಗಿದೆ ಎಂದು ಆಕ್ಷೇಪಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ