ದಿಶಾ ಸಾಲಿಯಾನ್ ಸಾವು ಪ್ರಕರಣ: ಎಸ್‌ಐಟಿ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶ
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಜೂನ್ 8, 2020 ರಂದು ಮುಂಬೈನ ಮಲಾಡ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವಿಗೀಡಾಗಿದ್ದರು. ಈ ಸಂಬಂಧ ಮುಂಬೈ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.
ಮುಂಬೈ ಡಿಸೆಂಬರ್ 12: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಮ್ಯಾನೇಜರ್ ದಿಶಾ ಸಾಲಿಯಾನ್ (Disha Salian) ಅವರ ಸಾವಿನ ಕುರಿತು ವಿಶೇಷ ತನಿಖಾ ತಂಡ(SIT) ತನಿಖೆಗೆ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಆದೇಶಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಾಲಿಯಾನ್ ಸಾವಿನ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗುವುದು ಎಂದು ವಿಧಾನಸಭೆಗೆ ತಿಳಿಸಿದ್ದರು.
ಈ ವರ್ಷದ ಅಕ್ಟೋಬರ್‌ನಲ್ಲಿ, ಬಿಜೆಪಿ ನಾಯಕ ನಿತೇಶ್ ರಾಣೆ ಅವರು ದಿಶಾ ಸಾಲಿಯಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರನ್ನು ಗುರಿಯಾಗಿಸಿದರು. ಅವರ ತಂದೆ ಮತ್ತು ಶಿವಸೇನಾದ ಹಿರಿಯ ನಾಯಕ ಉದ್ಧವ್ ಠಾಕ್ರೆ ಈ ವಿಷಯವನ್ನು ತಿಳಿಸಬೇಕೆಂದು ಒತ್ತಾಯಿಸಿದರು.
“ಇಂದು ಉದ್ಧವ್ ಠಾಕ್ರೆ ಶಿವಾಜಿ ಪಾರ್ಕ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಇದು ಸತ್ಯವನ್ನು ಮಾತನಾಡುವ ದಿನವಾಗಿದೆ ಎಂದು ಸಂಜಯ್ ರಾವತ್ ಹೇಳುತ್ತಾರೆ. ಹಾಗಾಗಿ ಇಂದಿನ ಭಾಷಣದಲ್ಲಿ ಉದ್ಧವ್ ಠಾಕ್ರೆ ದಿಶಾ ಸಾಲಿಯಾನ್ ಹತ್ಯೆ ಪ್ರಕರಣದಲ್ಲಿ ತಮ್ಮ ಪುತ್ರ ಆದಿತ್ಯ ಠಾಕ್ರೆ ಭಾಗಿಯಾಗಿರುವ ಬಗ್ಗೆ ಸತ್ಯವನ್ನು ಮಾತನಾಡುತ್ತಾರೆಯೇ? ದಿಶಾ ಸಾಲಿಯಾನ್ ಸಾವಿಗೂ ಮುನ್ನ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಬಳಸಲಾಗಿದೆಯೇ? ಎಂದು ನಿತೇಶ್ ರಾಣೆ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಆದಿತ್ಯ ಠಾಕ್ರೆಗೂ ದಿಶಾ ಸಾಲಿಯಾನಿಗೂ ಏನು ಸಂಬಂಧ? ಮೂರೂವರೆ ವರ್ಷಗಳ ನಂತರ ಎಸ್‌ಐಟಿ ವಿಚಾರಣೆ ಯಾಕೆ?
ಜೂನ್ 8, 2020 ರಂದು ಮುಂಬೈನ ಮಲಾಡ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾಲಿಯಾನ್ ಸಾವಿಗೀಡಾಗಿದ್ದರು.ಈ ಸಂಬಂಧ ಮುಂಬೈ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.
ದಿಶಾ ಸಾಲಿಯಾನ್ ಯಾರು?
ಕರ್ನಾಟಕದ ಉಡುಪಿಯಲ್ಲಿ ಜನಿಸಿದ ದಿಶಾ ಸಾಲಿಯಾನ್ ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದರು. ಅವರು ವರುಣ್ ಶರ್ಮಾ, ಸುಶಾಂತ್ ಸಿಂಗ್ ರಜಪೂತ್, ಭಾರತಿ ಸಿಂಗ್ ಅವರಂತಹ ಜನಪ್ರಿಯ ನಟರೊಂದಿಗೆ ಕೆಲಸ ಮಾಡಿದರು. ಇದಲ್ಲದೆ, ಆಕೆ ಅನೇಕ ಜಾಹೀರಾತು ಏಜೆನ್ಸಿಗಳೊಂದಿಗೆ ಸಂಬಂಧ ಹೊಂದಿದ್ದಳು. ಆಕೆ ಕಿರುತೆರೆ ನಟ ರೋಹನ್ ರಾಯ್ ಜೊತೆ ಡೇಟಿಂಗ್ ಮಾಡುತ್ತಿದ್ದು ಸಾವಿಗೆ ಕೆಲವು ತಿಂಗಳ ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ದಿಶಾ ಸಾವು ಪ್ರಕರಣ
9 ಜೂನ್ 2020 ರಂದು, ಮುಂಬೈನ ಮಲಾಡ್‌ನಲ್ಲಿರುವ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯಾನ್ ಸಾವಿಗೀಡಾಗಿದ್ದರು. ನಂತರ ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧ ಕಲ್ಪಿಸಲಾಗಿತ್ತು. ಏಕೆಂದರೆ ಸುಶಾಂತ್ 5 ದಿನಗಳ ನಂತರ ಅಂದರೆ 14 ಜೂನ್ 2020 ರಂದು ನಿಧನರಾದರು. 28 ವರ್ಷದ ದಿಶಾ ಸಾವಿನ ನಂತರ ಮುಂಬೈ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ. ಆಗಸ್ಟ್ 2021 ರಲ್ಲಿ, ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ