ಕೊಲ್ಕತ್ತಾ: ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮೊದಲು ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಮತ್ತೊಂದು ಅಚ್ಚರಿಯ ವಿದ್ಯಮಾನ ಘಟಿಸುವ ಸೂಚನೆ ಲಭ್ಯವಾಗಿದೆ. ಪಶ್ಚಿಮ ಬಂಗಾಳ ಹಾಗೂ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಿರಿಯ ರಾಜಕಾರಣಿ ಶಿಶಿರ್ ಅಧಿಕಾರಿ ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ. ಮಾರ್ಚ್ 24ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಭೆಯಲ್ಲಿ ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.
ಪ್ರಸ್ತುತ ಟಿಎಂಸಿ ಪಕ್ಷದ ಸಂಸದರಾಗಿರುವ ಶಿಶಿರ್ ಅಧಿಕಾರಿ, ಟಿಎಂಸಿಯ ಸ್ಥಾಪಕ ಸದಸ್ಯರೂ ಆಗಿದ್ದಾರೆ. ಇತ್ತೀಚೆಗಷ್ಟೇ ಶಿಶಿರ್ ಅಧಿಕಾರಿ ಪುತ್ರ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಆ ಬಳಿಕ, ಟಿಎಂಸಿಯ ಹಲವು ಶಾಸಕರು, ಸ್ಥಳೀಯ ನಾಯಕರು ಬಿಜೆಪಿ ಸೇರಿದ್ದರು. ಇದೀಗ ಶಿಶಿರ್ ಕೂಡ ಬಿಜೆಪಿ ಸೇರುವ ನಿರ್ಧಾರ ಹೇಳಿಕೊಂಡಿರುವುದು ಮಮತಾ ಬ್ಯಾನರ್ಜಿ ಮೇಲೆ ಒತ್ತಡ ಹೆಚ್ಚಿಸಲಿದೆ.
ಮಮತಾ ಬ್ಯಾನರ್ಜಿ ನಾಟಕ ಮಾಡುತ್ತಿದ್ದಾರೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಶಿಶಿರ್ ಆಧಿಕಾರಿ ತಿಳಿಸಿರುವ ಬಗ್ಗೆ ಆಂಗ್ಲ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಜಿದ್ದಾಜಿದ್ದಿ ಇದ್ದು ಚುನಾವಣಾ ಕಣ ರಂಗೇರುತ್ತಿದೆ. ಪಟ್ಟಭದ್ರ ಟಿಎಂಸಿ ಪಕ್ಷವನ್ನು ಹೊಡೆದುರುಳಿಸಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಟಿಎಂಸಿ ಕೂಡ ಇನ್ನೊಮ್ಮೆ ಅಧಿಕಾರಕ್ಕೇರುವ ಉತ್ಸಾಹ ತೋರಿದೆ.
ಇಬ್ಬರು ಸಹೋದರರು ಈಗಾಗಲೇ ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ
ಶಿಶಿರ್ ಅಧಿಕಾರಿ ಮಕ್ಕಳಿಬ್ಬರು ಈಗಾಗಲೇ ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸುವೇಂದು ಅಧಿಕಾರಿ ಮತ್ತು ಸೌಮೇಂದು ಅಧಿಕಾರಿ ಬಿಜೆಪಿ ಪಕ್ಷ ಸೇರಿದ್ದಾರೆ. ಶಿಶಿರ್ ಅಧಿಕಾರಿ ಮತ್ತೊಬ್ಬ ಪುತ್ರ ದಿವ್ಯೇಂದು ಅಧಿಕಾರಿ ಸದ್ಯ ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯರಾಗಿಯೇ ಇದ್ದಾರೆ. ನನಗೆ ಆಮಂತ್ರಣ ಬಂದರೆ, ನನ್ನ ಮಕ್ಕಳು ಒಪ್ಪಿದರೆ, ನಾನು ಮೋದಿಯ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗವಹಿಸುವೆ ಎಂದು ಇವರೆಲ್ಲರ ತಂದೆ ಆಗಿರುವ ಶಿಶಿರ್ ಅಧಿಕಾರಿ ಭಾನುವಾರ ತಿಳಿಸಿದ್ದರು.
ಇದಕ್ಕೂ ಮುನ್ನ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಲೋಕಸಭಾ ಸದಸ್ಯೆ ಲಾಕೆಟ್ ಚಟರ್ಜಿ ಶನಿವಾರ, ಶಿಶಿರ್ ಅಧಿಕಾರಿ ನಿವಾಸಕ್ಕೆ ತೆರಳಿದ್ದರು. ಜೊತೆಯಾಗಿ ಊಟವನ್ನೂ ಸವಿದಿದ್ದರು. ಅವರಿಬ್ಬರೂ ತಮ್ಮದು ಸೌಜನ್ಯದ ಭೇಟಿ ಎಂದು ವಿವರಿಸಿದ್ದರೂ ಸಾರ್ವಜನಿಕ ವಲಯದಲ್ಲಿ ರಾಜಕೀಯ ಗುಲ್ಲೆದ್ದಿತ್ತು. ಇದೀಗ ಲಭ್ಯವಾಗಿರುವ ಮಾಹಿತಿಯಂತೆ ಶಿಶಿರ್ ಅಧಿಕಾರಿ ಜೊತೆಗೆ, ಸುವೇಂದು ಸಹೋದರ ಕೂಡ ಬಿಜೆಪಿ ಪಕ್ಷ ಸೇರುವ ಸಾಧ್ಯತೆ ದಟ್ಟವಾಗಿದೆ. ಕಳೆದ ಕೆಲವು ತಿಂಗಳಿನಿಂದ ಅವರು ತೃಣಮೂಲ ಕಾಂಗ್ರೆಸ್ನ ಚಟುವಟಿಕೆಗಳಲ್ಲಿ ಅಷ್ಟಾಗಿ ಕ್ರಿಯಾಶೀಲರಾಗಿಲ್ಲದೇ ಇರುವುದು, ಚುನಾವಣಾ ಪ್ರಚಾರದಲ್ಲೂ ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳದಿರುವುದು ಈ ಅನುಮಾನಗಳು ದಟ್ಟವಾಗುವಂತೆ ಮಾಡಿದೆ.
ಇದನ್ನೂ ಓದಿ: West Bengal Elections 2021: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ
Published On - 5:28 pm, Fri, 19 March 21