ಕೊರೊನಾ ಸೋಂಕು ಹೆಚ್ಚಳ; ಮುಂಬೈನಲ್ಲಿ ಶಾಪಿಂಗ್ ಮಾಲ್ ಪ್ರವೇಶಿಸಲು ಕೊವಿಡ್ ನೆಗೆಟಿವ್ ವರದಿ ಕಡ್ಡಾಯ
ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗ್ತಿರುವ ಹಿನ್ನೆಲೆ, ಮುಂಬೈನಲ್ಲಿ ಶಾಪಿಂಗ್ ಮಾಲ್ಗೆ ಹೋಗಲು ಕೊವಿಡ್ ವರದಿ ಕಡ್ಡಾಯಗೊಳಿಸಲಾಗಿದೆ. ಆರ್ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಆ್ಯಂಟಿಜೆನ್ ಟೆಸ್ಟ್ ವರದಿ ಇದ್ದರೆ ಮಾತ್ರ ಶಾಪಿಂಗ್ ಮಾಲ್ಗೆ ಪ್ರವೇಶ ನೀಡಲಾಗುತ್ತದೆ.
ಮುಂಬೈ: ದೇಶಾದ್ಯಂತ ಕೊರೊನಾ ವೈರಸ್ ಎರಡನೇ ಅಲೆ ಭೀತಿ ವೇಗವಾಗಿ ವ್ಯಾಪಿಸುತ್ತಿದ್ದು, ಅತಿ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಜ್ಜೆ ಇಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗ್ತಿರುವ ಹಿನ್ನೆಲೆ, ಮುಂಬೈನಲ್ಲಿ ಶಾಪಿಂಗ್ ಮಾಲ್ಗೆ ಹೋಗಲು ಕೊವಿಡ್ ವರದಿ ಕಡ್ಡಾಯಗೊಳಿಸಲಾಗಿದೆ. ಆರ್ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಆ್ಯಂಟಿಜೆನ್ ಟೆಸ್ಟ್ ವರದಿ ಇದ್ದರೆ ಮಾತ್ರ ಶಾಪಿಂಗ್ ಮಾಲ್ಗೆ ಪ್ರವೇಶ ನೀಡಲಾಗುತ್ತದೆ. ಈ ನಿಯಮ ಮಾರ್ಚ್ 22ರಿಂದ ಜಾರಿಯಾಗಲಿದ್ದು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಬುಧವಾರ ಒಂದೇ ದಿನ 25 ಸಾವಿರ ಕೊರೊನಾ ಕೇಸ್ಗಳು ದಾಖಲಾಗಿವೆ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಮತ್ತೆ ಲಾಕ್‌ಡೌನ್ ಹೇರಿಕೆ ಆಗುವ ಭೀತಿ ಕೂಡ ಕಾಡಿದೆ.
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಸಾಧ್ಯತೆ.. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಿದೆ. ಇದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಕರಣಗಳು ಹೀಗೆಯೇ ಮುಂದುವರಿದರೆ ಲಾಕ್‌ಡೌನ್ ಘೋಷಣೆ ಮಾಡುವ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಉದ್ಧವ್ ಠಾಕ್ರೆ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.
ಮಹಾರಾಷ್ಟ್ರದ ಕೊವಿಡ್ ಪರಿಸ್ಥಿತಿ ಗಂಭೀರವಾಗಿದೆ. ದೈನಂದಿನ ಅಂಕಿ ಅಂಶಗಳ ಪ್ರಸ್ತುತ ಏರಿಕೆ ಆತಂಕ ಮೂಡಿಸಿದೆ. ಇದು ಸೋಂಕಿನ ಹೊಸ ಅಲೆಯೇ ಎಂದು ಕಂಡುಹಿಡಿಯಲು ಮತ್ತೊಂದು ಲಾಕ್‌ಡೌನ್ ತಪ್ಪಿಸಲು ಜನರು ಕೊರೊನಾ ವೈರಸ್ ನಿಯಂತ್ರಣ ಶಿಷ್ಟಾಚಾರಗಳನ್ನು ಅನುಸರಿಸಬೇಕೆಂದು ಅವರು ಎಚ್ಚರಿಸಿದ್ದರು. ಲಾಕ್‌ಡೌನ್ ಅಗತ್ಯವಿದೆಯೇ? ನೀವು ಜವಾಬ್ದಾರಿಯುತವಾಗಿ ವರ್ತಿಸಿ. ಲಾಕ್‌ಡೌನ್ ಬೇಡದವರು ಮಾಸ್ಕ್ ಧರಿಸುತ್ತಾರೆ. ಲಾಕ್‌ಡೌನ್ ಬಯಸುವವರು ಮಾಸ್ಕ್ ಧರಿಸುವುದಿಲ್ಲ. ಮಾಸ್ಕ್ ಧರಿಸಿ, ಲಾಕ್‌ಡೌನ್ ಬೇಡವೆನ್ನಿ ಎಂದು ಉದ್ಧವ್ ಕರೆ ನೀಡಿದ್ದರು.
ಇದನ್ನೂ ಓದಿ: ಕಾಲೇಜುಗಳಿಗೆ ಕಂಟಕವಾದ ಕೊರೊನಾ.. ಕಿಟ್ ಧರಿಸಿ ಮಹಾರಾಣಿ ಕಾಲೇಜಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು