ಸುವೇಂದು ಆಪ್ತ ಸಹಾಯಕ ಚಂದ್ರನಾಥ್ ರಥ್ ಕೊಲೆಯಾಗಿದ್ದು ಹೇಗೆ? ಭೀಕರ ಕೃತ್ಯದ ವಿವರ ಇಲ್ಲಿದೆ

ಪಶ್ಚಿಮ ಬಂಗಾಳದ ಉತ್ತರ 24 ಪರಗಣದಲ್ಲಿ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಭೀಕರ ಕೊಲೆಯು ರಾಜ್ಯಾದ್ಯಂತ ಆಘಾತ ಮೂಡಿಸಿದೆ. ಪೂರ್ವ ಯೋಜಿತವಾಗಿ ಎಸ್‍ಯುವಿ ಅಡ್ಡಗಟ್ಟಿ, ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದೆ ರಾಜಕೀಯ ಸಂಚು ಇರುವ ಬಗ್ಗೆ ಸುವೇಂದು ಅಧಿಕಾರಿ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಬಂಗಾಳ ರಾಜಕೀಯದಲ್ಲಿ ಆತಂಕ ಸೃಷ್ಟಿಸಿದೆ.

ಸುವೇಂದು ಆಪ್ತ ಸಹಾಯಕ ಚಂದ್ರನಾಥ್ ರಥ್ ಕೊಲೆಯಾಗಿದ್ದು ಹೇಗೆ? ಭೀಕರ ಕೃತ್ಯದ ವಿವರ ಇಲ್ಲಿದೆ
ಚಂದ್ರನಾಥ್
Image Credit source: NDTV

Updated on: May 07, 2026 | 1:00 PM

ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal)ದ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದ ಆ ಒಂದು ಘಟನೆ ಇಡೀ ರಾಜ್ಯವನ್ನೇ ನಡುಗಿಸಿದೆ. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (41) ಅವರನ್ನು ಹಂತಕರು ಅಟ್ಟಾಡಿಸಿ ಕೊಂದ ರೀತಿ ತನಿಖಾಧಿಕಾರಿಗಳನ್ನೂ ಬೆಚ್ಚಿಬೀಳಿಸಿದೆ.

ಮೂರು ದಿನಗಳ ಕಾಲ ಬೆನ್ನೇರಿದ್ದ ‘ನೆರಳು’
ಚಂದ್ರನಾಥ್ ರಥ್ ಹಂತಕರ ಕಣ್ಣಿಗೂ ಬಿದ್ದಿದ್ದರು. ಅಧಿಕಾರಿಗಳು ನೀಡುವ ಮಾಹಿತಿಯ ಪ್ರಕಾರ, ಹಂತಕರು ಕಳೆದ 2-3 ದಿನಗಳಿಂದ ಚಂದ್ರನಾಥ್ ಅವರ ಓಡಾಟದ ಮೇಲೆ ನಿರಂತರ ನಿಗಾ ಇಟ್ಟಿದ್ದರು. ಅವರು ಯಾವಾಗ ಎಸ್‌ಯುವಿ ಹತ್ತುತ್ತಾರೆ, ಯಾವ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂಬುದನ್ನು ಮೊದಲೇ ಪತ್ತೆ ಹಚ್ಚಿ ರೆಕ್ಕಿ ನಡೆಸಲಾಗಿತ್ತು.

ಬುಧವಾರ ರಾತ್ರಿ ಚಂದ್ರನಾಥ್ ಅವರು ತಮ್ಮ ಎಸ್‌ಯುವಿಯಲ್ಲಿ ದೊಹರಿಯಾ ಪ್ರದೇಶದ ಸಾರ್ವಜನಿಕ ರಸ್ತೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಹಂತಕರು ತಮ್ಮ ಕಾರನ್ನು ಚಂದ್ರನಾಥ್ ಅವರ ಎಸ್‌ಯುವಿಗೆ ಅಡ್ಡಲಾಗಿ ನಿಲ್ಲಿಸಿದರು. ವಾಹನ ಮುಂದೆ ಹೋಗಲು ದಾರಿಯಿಲ್ಲದೆ ಚಂದ್ರನಾಥ್ ಅಲ್ಲಿಯೇ ಸಿಕ್ಕಿಬಿದ್ದರು.

ಎಸ್‌ಯುವಿ ನಿಲ್ಲುತ್ತಿದ್ದಂತೆಯೇ, ಕಾರಿನ ಹಿಂದೆ ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದರು. ಎಸ್‌ಯುವಿ ವಿಂಡೋ ಬಳಿ ಬಂದ ಹಂತಕರು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಚಂದ್ರನಾಥ್ ಮೇಲೆ ಗುಂಡಿನ ಮಳೆಗರೆದರು. ಸುತ್ತಮುತ್ತಲಿನ ಜನರು ಚೇತರಿಸಿಕೊಳ್ಳುವಷ್ಟರಲ್ಲೇ ಹಂತಕರು ಅಲ್ಲಿಂದ ಪರಾರಿಯಾಗಿದ್ದರು.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳ: ಬಿಜೆಪಿ-ಟಿಎಂಸಿ ಕಾರ್ಯಕರ್ತರ ಮಧ್ಯೆ ಭಾರೀ ಸಂಘರ್ಷ, ನಾಲ್ವರು ಸಾವು, ಉದ್ವಿಗ್ನ ಪರಿಸ್ಥಿತಿ

ಹತ್ಯೆಯ ಹಿಂದೆ ರಾಜಕೀಯ ಸಂಚು?
ಈ ಘಟನೆಯನ್ನು ಪೂರ್ವ ಯೋಜಿತ ನಿರ್ದಯ ಕೊಲೆ ಎಂದು ಸುವೇಂದು ಅಧಿಕಾರಿ ಬಣ್ಣಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿರುವ ಈ ಸಂದರ್ಭದಲ್ಲೇ, ಅತ್ಯಂತ ಆಪ್ತ ವ್ಯಕ್ತಿಯನ್ನು ಕಳೆದುಕೊಂಡಿರುವುದು ಬಿಜೆಪಿಗೆ ದೊಡ್ಡ ಆಘಾತ ತಂದಿದೆ. ಇದು ಟಿಎಂಸಿಯ ಮಹಾಜಂಗಲ್ ರಾಜ್‌ನ ಪರಿಣಾಮ ಎಂದು ಕಿಡಿಕಾರಿರುವ ಅಧಿಕಾರಿ, ಹಂತಕರು ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಬಂಗಾಳ ಡಿಜಿಪಿ ಸಿದ್ಧ್ ನಾಥ್ ಗುಪ್ತಾ ಅವರು ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಂತಕರು ಎಸ್‌ಯುವಿಯನ್ನು ಲಾಕ್ ಮಾಡಿದ್ದ ಸ್ಥಳದಲ್ಲಿ ಕೆಲವು ಪ್ರಮುಖ ಪುರಾವೆಗಳು ಲಭ್ಯವಾಗಿವೆ. ಇದೊಂದು ರಾಜಕೀಯ ಪ್ರೇರಿತ ಹತ್ಯೆಯೋ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಮಾಫಿಯಾದ ಕೈವಾಡವಿದೆಯೇ ಎಂಬುದು ಪೊಲೀಸರ ಮುಂದಿರುವ ಸವಾಲು. ಒಬ್ಬ ಸಾಮಾನ್ಯ ಸಹಾಯಕನ ಹತ್ಯೆಯು ಈಗ ಬಂಗಾಳದ ರಾಜಕೀಯ ಬಿಸಿಯನ್ನು ಮತ್ತಷ್ಟು ಏರಿಸಿದ್ದು, ಅಧಿಕಾರ ಹಸ್ತಾಂತರದ ಈ ಸುಡುವ ಸಮಯದಲ್ಲಿ ಈ ರಕ್ತಪಾತ ಎಲ್ಲೆಡೆ ಆತಂಕ ಮೂಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us