ಅಫ್ಘಾನಿಸ್ತಾನದ ಹಿಂದು ಮತ್ತು ಸಿಖ್ ಸಮುದಾಯಗಳಿಗೆ ಸೇರಿದ 72 ಜನರ ಬ್ಯಾಚ್ ಕಾಬೂಲ್ ಏರ್ಪೋರ್ಟ್ (Kabul Airport)ನಲ್ಲಿ ಭಾರತೀಯ ಏರ್ಫೋರ್ಸ್ ವಿಮಾನ (IAF Plane)ವನ್ನು ಹತ್ತಲು ಮುಂದಾಗುತ್ತಿದ್ದಾಗ, ತಾಲಿಬಾನ್ ಉಗ್ರ (Taliban Terrorists)ರು ಅವರನ್ನು ತಡೆದಿದ್ದಾರೆ. ಅಷ್ಟೇ ಅಲ್ಲ, ಆ 72 ಮಂದಿಯನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ವಾಪಸ್ ಕಳಿಸಿದ್ದಾರೆ. ಈ 72 ಮಂದಿಯಲ್ಲಿ ಅಫ್ಘಾನಿಸ್ತಾನದ ಹಿಂದಿನ ಸಂಸತ್ತಿನ ಇಬ್ಬರು ಅಲ್ಪಸಂಖ್ಯಾತ ಸದಸ್ಯರೂ ಇದ್ದರು. ಉಗ್ರರ ಕೈವಶವಾದ ಅಫ್ಘಾನಿಸ್ತಾನದಿಂದ ಸಾವಿರಾರು ಜನರು ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ಸಿಕ್ಕ ವಿಮಾನವನ್ನು ಹತ್ತಿ ಪಲಾಯನ ಮಾಡುತ್ತಿದ್ದಾರೆ. ಅದರಂತೆ ಅಫ್ಘಾನ್ನ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು-ಸಿಖ್ರಿಗೆ ಭಾರತದಲ್ಲಿ ಅವಕಾಶ ಕೊಡಲಾಗುವುದು ಎಂದು ಹೇಳಲಾಗಿತ್ತು.
ಭಾರತಕ್ಕೆ ತೆರಳಬೇಕು ಎಂದು ಹಿಂದು ಮತ್ತು ಸಿಖ್ ಸಮುದಾಯದ 72 ಜನರನ್ನೊಳಗೊಂಡ ಮೊದಲ ಬ್ಯಾಚ್ ಶುಕ್ರವಾರದಿಂದಲೂ ಏರ್ಪೋರ್ಟ್ನ ಹೊರಗೆ ಕಾಯುತ್ತಿತ್ತು. ಬರೋಬ್ಬರಿ 12 ತಾಸುಗಳು ಕಾದ ಬಳಿಕವೂ ಅವರಿಗೆ ಅಲ್ಲಿಂದ ತೆರಳಲು ತಾಲಿಬಾನಿಗಳು ಬಿಡಲಿಲ್ಲ. ಅವರು ಇನ್ನೇನು ಭಾರತೀಯ ವಾಯುಸೇನೆ ವಿಮಾನವನ್ನು ಹತ್ತಬೇಕು ಎನ್ನುವಷ್ಟರಲ್ಲಿ ತಾಲಿಬಾನ್ ಉಗ್ರರು ತಡೆದಿದ್ದಾರೆ. ಅಲ್ಲಿಂದಲೇ ವಾಪಸ್ ಕಳೆಸಿದ್ದಾರೆ ಎಂದು ವಿಶ್ವ ಪಂಜಾಪಿ ಸಂಸ್ಥೆ (WPO) ಅಧ್ಯಕ್ಷ ವಿಕ್ರಮಜಿತ್ ಸಿಂಗ್ ಸಾಹ್ನಿ ತಿಳಿಸಿದ್ದಾರೆ. ಹಾಗೇ, ಈ 72 ಮಂದಿಯನ್ನು ಕಾಬೂಲ್ನಲ್ಲಿ ಗುರುದ್ವಾರಕ್ಕೆ ಸುರಕ್ಷಿತವಾಗಿ ವಾಪಸ್ ಕಳಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಸದ್ಯಕ್ಕಂತೂ ಅಫ್ಘಾನ್ನಲ್ಲಿರುವ ಹಿಂದು ಮತ್ತು ಸಿಖ್ರನ್ನು ಭಾರತಕ್ಕೆ ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಒಂದೋ ತಾಲಿಬಾನಿಗಳ ಜತೆ ಮಾತುಕತೆ ನಡೆಸಬೇಕು. ಇಲ್ಲವಾದರೆ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗುರು ತೇಗ್ ಬಹದ್ದೂರ್ ಅವರ 400ನೇ ಜನ್ಮಜಯಂತಿ ನಿಮಿತ್ತ ಸಿಖ್ರು ಭಾರತಕ್ಕೆ ಭೇಟಿ ಕೊಡಲೇಬೇಕಿದೆ ಎಂಬುದನ್ನು ತಾಲಿಬಾನಿಗಳಿಗೆ ಮನವರಿಕೆ ಮಾಡಿಕೊಡಬೇಕು. ಇನ್ನು ಹಿಂದುಗಳ ವಿಚಾರದಲ್ಲೂ ಕೂಡ ಅಂಥದ್ದೇ ಯಾವುದಾದರೂ ಕಾರಣ ಹೇಳಬೇಕು ಎಂದು ಸಾಹ್ನಿ ಅಭಿಪ್ರಾಯಪಟ್ಟಿದ್ದಾರೆ.
ಗುರುದ್ವಾರದಲ್ಲಿ ಆಶ್ರಯ
ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಾಗಿನಿಂದಲೂ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಾದ ಸಿಖ್ ಮತ್ತು ಹಿಂದುಗಳು ಕಷ್ಪಪಡುತ್ತಿದ್ದಾರೆ. ಅದರಲ್ಲಿ ಸುಮಾರು 280 ಸಿಖ್ರು ಮತ್ತು 30-40 ಹಿಂದುಗಳು ಕಾಬೂಲ್ನ ಗುರುದ್ವಾರದಲ್ಲಿ ಉಳಿದುಕೊಂಡಿದ್ದಾರೆ. ತಾಲಿಬಾನಿಗಳು ಅವರಿಗೆ ಸುರಕ್ಷತೆಯ ಭರವಸೆ ನೀಡಿದ್ದಾರೆ. ನಿಮ್ಮ ಸುರಕ್ಷತೆ ನಮ್ಮ ಹೊಣೆ. ಶಾಂತಿಯಿಂದ ಇರುತ್ತೇವೆ. ಈ ದೇಶ ಬಿಡಬೇಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಕ್ಷರಾ- ಜೀಶಾನ್ ನಡುವೆ ಕಿತ್ತಾಟ; ಪಕ್ಕದಲ್ಲೇ ಇದ್ದರೂ ತಲೆಕೆಡಿಸಿಕೊಳ್ಳದೇ ರೊಟ್ಟಿ ತಟ್ಟಿದ ಶಮಿತಾ ಶೆಟ್ಟಿ
Gujarat Earthquake: ಕಚ್ನಲ್ಲಿ ಮತ್ತೆ ಭೂಕಂಪ; ಈ ಬಾರಿ 4.1ರಷ್ಟು ತೀವ್ರತೆ ದಾಖಲು