ಚೆನ್ನೈ: ಮೇ 24ರೊಳಗೆ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಸುತ್ತೇವೆ. ಈ ಬಗ್ಗೆ ಶೀಘ್ರವೇ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರ ಹೇಳಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಕುರಿತು ಚೆನ್ನೈನಲ್ಲಿ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 24ಕ್ಕೆ ತಮಿಳುನಾಡು ವಿಧಾನಸಭೆ ಅವಧಿ ಪೂರ್ಣಗೊಳ್ಳುತ್ತದೆ. ಹೀಗಾಗಿ, ಈ ಅವಧಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನಾವು ದೆಹಲಿಗೆ ಹೋದ ನಂತರ ಚುನಾವಣೆ ದಿನಾಂಕವನ್ನು ಬಹಿರಂಗಪಡಿಸಲಾಗುವುದು ಎಂದರು.
ಕನ್ಯಾಕುಮಾರಿ ಲೋಕಸಭೆ ಉಪಚನಾವಣೆಯೂ ನಡೆಯಲಿದೆ
ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮತದಾನ ನಡೆಸುತ್ತೇವೆ ಎಂದಿರುವ ಸುನೀಲ್ ಅರೋರ, ತಮಿಳುನಾಡು ವಿಧಾನಸಭೆ ಜತೆಗೆ ಕನ್ಯಾಕುಮಾರಿ ಲೋಕಸಭೆ ಉಪಚನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಚುನಾವಣೆ ನಡೆಸುವ ಕುರಿತು ರಾಜಕೀಯ ನಾಯಕರ ಜತೆ ಚರ್ಚೆ ಮಾಡಿದ್ದೇವೆ. ಕೊರೊನಾ ಮಾರ್ಗಸೂಚಿ ಪ್ರಕಾರವೇ ಮುಂಜಾಗ್ರತಾ ಕ್ರಮ ಚುನಾವಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
Tamil Nadu Assembly tenure due to expire on May 24,2021. Elections are due for 234 Assembly constituencies; General: 188, SC: 44 & ST: 02. Election Commission committed to COVID- safe elections with special focus on participation of new voters & women: Sunil Arora, CEC pic.twitter.com/lpOmFU2Rd3
— ANI (@ANI) February 11, 2021
ಮತದಾನ ಕೇಂದ್ರಗಳನ್ನು ಹೆಚ್ಚಾಗಿ ಸ್ಥಾಪಿಸುವ ಬಗ್ಗೆಯೂ ಮಾಹಿತಿ ನೀಡಿರುವ ಸುನೀಲ್ ಅರೋರ, 25 ಸಾವಿರ ಮತದಾನ ಕೇಂದ್ರಗಳನ್ನು ಹೆಚ್ಚಾಗಿ ಸ್ಥಾಪಿಸಲಾಗುವುದು. ಕಳೆದಬಾರಿ 68 ಸಾವಿರ ಇದ್ದ ಮತಗಟ್ಟೆ ಈ ಬಾರಿ 93 ಸಾವಿರಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ. ರಾಜಕೀಯ ನಾಯಕರು ಕೂಡ ಕೆಲ ಸಲಹೆಗಳನ್ನು ನೀಡಿದ್ದಾರೆ. ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ಮತದಾರರ ದಿನಾಚರಣೆ | ರಿಮೋಟ್ ವೋಟಿಂಗ್ ತಂತ್ರಜ್ಞಾನ ಅಭಿವೃದ್ಧಿಗೆ ಆಯೋಗ ಪ್ರಯತ್ನ