ಚೆನ್ನೈ: ತಮಿಳುನಾಡಿನಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆಯ ಬಗ್ಗೆ ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುವಂತೆ ನೋಡಿಕೊಳ್ಳಲು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಈ ವಾರ ಸಂಭವಿಸಿದ 13 ಮಂದಿಯ ಸಾವಿಗೆ ಆಮ್ಲಜನಕ ಪೂರೈಕೆಯ ಕೊರತೆಯೇ ಕಾರಣವಾಗಿತ್ತು ಎಂಬುದನ್ನು ಉಲ್ಲೇಖಿಸಿ ಸ್ಟಾಲಿನ್ ಮೋದಿ ಬಳಿ ವಿಚಾರ ಹಂಚಿಕೊಂಡಿದ್ದಾರೆ.
ಆಮ್ಲಜನಕ ಪೂರೈಕೆಯ ಸಮಸ್ಯೆ ಬಿಕ್ಕಟ್ಟಿನದ್ದಾಗಿದೆ ಎಂದು ಸ್ಟಾಲಿನ್, ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕದ ತಮ್ಮ ಮೊದಲ ಅಧಿಕೃತ ಮಾತುಕತೆಯಲ್ಲಿ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ತಡೆಗಟ್ಟಲು ಬೇಕಾದ ಕ್ರಮಗಳನ್ನು ರಾಜ್ಯಸರ್ಕಾರ ತೆಗೆದುಕೊಳ್ಳಲಿದೆ. ಅದೇ ವಿಚಾರವಾಗಿ ತುರ್ತು ಅವಶ್ಯವಿರುವ ಆಮ್ಲಜನಕ ಪೂರೈಕೆಯ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ ಎಂದು ಸ್ಟಾಲಿನ್ ಮೋದಿಗೆ ತಿಳಿಸಿದ್ದಾರೆ.
ತಮಿಳುನಾಡು ರಾಜ್ಯದ ಪ್ರತಿನಿತ್ಯದ ವೈದ್ಯಕೀಯ ಆಮ್ಲಜನಕ ಬಳಕೆಯ ಪ್ರಮಾಣ 440 ಮೆಟ್ರಿಕ್ ಟನ್ಗಳಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಆಮ್ಲಜನಕದ ಅವಶ್ಯಕತೆಯ ಪ್ರಮಾಣ 840 ಮೆಟ್ರಿಕ್ ಟನ್ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸ್ಟಾಲಿನ್, ಮೋದಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ಆದರೆ, ಕೇಂದ್ರದ ಆಕ್ಸಿಜನ್ ಪ್ಲಾನ್ ಪ್ರಕಾರ, ತಮಿಳುನಾಡಿನ ಆಮ್ಲಜನಕ ಪೂರೈಕೆ ಪ್ರಮಾಣ 220 ಮೆಟ್ರಿಕ್ ಟನ್ ಆಗಿದೆ. ಈ ಮೊದಲು, ಅಂದರೆ ಮೇ 1 ಮತ್ತು 2ರಂದು ರಾಜ್ಯ ಉನ್ನತ ಅಧಿಕಾರಿಗಳು, ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಅಭಿವೃದ್ಧಿ ವಿಭಾಗ (DPIIT) ಜೊತೆಗೆ ನಡೆಸಿದ ಸಭೆಯಂತೆ ಕನಿಷ್ಠ 476 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗಿದೆ.
ಕೊರೊನಾ ಪರಿಸ್ಥಿತಿ ನಿಯಂತ್ರಿಸಲು ಸೂಕ್ತ ಮತ್ತು ಸಂಪೂರ್ಣ ಸಹಕಾರ ನೀಡುವಂತೆ ಸ್ಟಾಲಿನ್ ಮೋದಿಗೆ ಪತ್ರದ ಮೂಲಕ ಕೇಳಿಕೊಂಡಿದ್ದಾರೆ. ಜೊತೆಗೆ, ಕನಿಷ್ಠ 20 ಐಎಸ್ಒ ಕ್ರೈಯೋಜೆನಿಕ್ ಕಂಟೈನರ್ಗಳನ್ನು ಹಾಗೂ ಆಮ್ಲಜನಕ ಸರಬರಾಜಿಗೆ ರೈಲು ಸಂಪರ್ಕವನ್ನು ಕೂಡ ನೀಡುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೊವಿಡ್ ಸೋಂಕಿತರಿಗೆ ಆಕ್ಸಿಜನ್ ಹಾಗೂ ಬೆಡ್ ಕೊರತೆ ನೀಗಿಸಲು ಉಪಮುಖ್ಯಮಂತ್ರಿ ಪರಿಹಾರ ಸೂತ್ರ; ವಿವರಗಳನ್ನು ಓದಿ
ಆಮ್ಲಜನಕ ಸಾಂದ್ರಕಗಳಿಗೆಂದು ಬೈಕ್ ಮಾರಿದ ನಟ!
(Tamil Nadu CM Stalin writes letter on Severe Oxygen Crisis to PM Narendra Modi)
Published On - 11:11 pm, Fri, 7 May 21