ಚೆನ್ನೈ: ಕೊವಿಡ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕೊವಿಡ್ ಲಾಕ್ಡೌನ್ (Tamil Nadu Lockdown) ಅಗಸ್ಟ್ 9ರವರೆಗೆ ವಿಸ್ತರಿಸಿದೆ. ಈಮುಂಚೆ ವಿಧಿಸಿದ್ದ ಕೊವಿಡ್ ಲಾಕ್ಡೌನ್ ನಿಯಮಗಳೇ ಅನ್ವಯವಾಗಲಿದ್ದು, ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೊವಿಡ್ ಮೂರನೇ ಅಲೆ ಬಂದೆರಗುವ ಸಂಭವ ಇರುವುದರಿಂದ ಕೊವಿಡ್ ತಡೆ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಮೂರು ದಿನಗಳಿಂದ ತಮಿಳುನಾಡಿನಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅಲ್ಲಿಯ ಆರೋಗ್ಯ ಸಚಿವ ಎಂ. ಸುಬ್ರಹ್ಮಣಿಯನ್ ಆತಂಕ ವ್ಯಕ್ತಪಡಿಸಿದ್ದಾರೆ. ಇಂದು 1,859 ಕೊವಿಡ್ ಸೋಂಕಿತರು ಪತ್ತೆಯಾಗಿದ್ದು, ಈ ಸಂಖ್ಯೆ ನಿನ್ನೆ ಖಚಿತಗೊಂಡ ಪ್ರಕರಣಗಳಿಗಿಂತ ಹೆಚ್ಚಿದೆ. ನಾಗರಿಕರು ಫೇಸ್ ಮಾಸ್ಕ್ ತೊಡುವುದನ್ನು ಮರೆಯುತ್ತಿದ್ದಾರೆ. ಇದು ಸಹಜವಾಗಿ ಆತಂಕವನ್ನು ಹೆಚ್ಚಿಸಿದೆ.
ಕೊವಿಡ್ ಮೂರನೇ ಅಲೆ ಬರದಂತೆ ತಡೆಯಲು ತಮಿಳುನಾಡು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಸ್ಥಳೀಯವಾಗಿ ಯಾವುದೇ ಪ್ರದೇಶದಲ್ಲಿ ಅಗತ್ಯ ನಿಯಮ ರೂಪಿಸಲು ಅಧಿಕಾರ ಒದಗಿಸಲಾಗಿದೆ. ನಿಯಮ ಮೀರಿದವರಿಗೆ ಶಿಕ್ಷೆ ವಿಧಿಸಲು ಸಹ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ತಮಿಳುನಾಡು ರಾಜ್ಯದಲ್ಲಿ 1,947 ಜನರಿಗೆ ಕೊರೊನಾ ದೃಢಪಟ್ಟಿದ್ದು, ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 25,57,611ಕ್ಕೆ ಏರಿಕೆಯಾಗಿದೆ. 25,57,611 ಸೋಂಕಿತರ ಪೈಕಿ 25,02,627 ಜನರು ಗುಣಮುಖರಾಗಿದ್ದಾರೆ. ತಮಿಳುನಾಡಿನಲ್ಲಿ ಇಂದು 2,193 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಕೊರೊನಾ ಸೋಂಕಿಗೆ 27 ಜನರ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ ಈವರೆಗೆ ಕೊರೊನಾಗೆ 34,050 ಜನರು ನಿಧನರಾಗಿದ್ದಾರೆ. ಸದ್ಯ 20,934 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಇದನ್ನೂ ಓದಿ:
ಕೊವಿಡ್-19 ಡೆಲ್ಟಾ ರೂಪಾಂತರಿ ಸಿಡುಬು ರೀತಿ ಹರಡಬಲ್ಲದು, ತೀವ್ರ ಸೋಂಕು ಹರಡುವಿಕೆಗೂ ಕಾರಣವಾಗುತ್ತದೆ: ವರದಿ
Explainer: ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿರುವುದೇಕೆ? (Tamil Nadu extends Covid lockdown by August 9th)