ಚೆನ್ನೈ: ಬಹುತೇಕ ರಾಜ್ಯ ಸರ್ಕಾರಗಳು ಲಾಕ್ಡೌನ್ ತೆರವುಗೊಳಿಸಿ ಅನ್ಲಾಕ್ ಹಂತಗಳಲ್ಲಿ ಒಂದೊಂದೇ ಚಟುವಟಿಕೆಗಳನ್ನು ಪ್ರಾರಂಭಿಸಿವೆ. ಆದರೆ ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿವೆ. ಈ ಮಧ್ಯೆ, ತಮಿಳುನಾಡು ಸರ್ಕಾರ ಸದ್ಯ ಲಾಕ್ಡೌನ್ ನಿರ್ಬಂಧವನ್ನು ತೆಗೆಯುವುದಿಲ್ಲ ಎಂದು ಹೇಳಿದೆ.
ತಮಿಳುನಾಡಿನಲ್ಲಿ ಡಿ. 31ರವರೆಗೂ ಲಾಕ್ಡೌನ್ ವಿಸ್ತರಿಸಿ ಮುಖ್ಯಮಂತ್ರಿ ಇ.ಕೆ. ಪಳಿನಿಸ್ವಾಮಿ ಆದೇಶ ಹೊರಡಿಸಿದ್ದಾರೆ. ಹಾಗೇ ಡಿಸೆಂಬರ್ 7ರಿಂದ ಪದವಿಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಲಿದೆ ಮತ್ತು ಡಿ. 15ರ ನಂತರ ಪ್ರವಾಸಿ ತಾಣ ಮರೀನಾ ಬೀಚ್ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.
ಆದರೆ ದಿನದಲ್ಲಿ 200 ಜನರಷ್ಟೇ ಅಲ್ಲಿ ಸೇರಬಹುದು. ಹಾಗೇ, ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳಗಳನ್ನು ಪ್ರಾರಂಭಿಸಲಾಗುವುದು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಮಾಸ್ಕ್, ಸಾಮಾಜಿಕ ಅಂತರ ನಿಯಮಪಾಲನೆಯಂತಹ ಷರತ್ತುಗಳು ಕಡ್ಡಾಯವಾಗಿ ಅನ್ವಯಿಸುತ್ತವೆ ಎಂದು ಹೇಳಿದೆ.
ಒಂದು ದಿನದಲ್ಲಿ 9 ಸೋಂಕಿತರು ಸಾವು
ತಮಿಳುನಾಡಿನಲ್ಲಿ ಭಾನುವಾರ ಒಂದೇ ದಿನ 1,459 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,80,505ಕ್ಕೆ ಏರಿಕೆಯಾಗಿದೆ.
ಅನ್ಲಾಕ್ಗೆ ಅವಕಾಶ ಕೊಟ್ಟಿರುವ ಕೇಂದ್ರ ಸರ್ಕಾರ, ನಿರ್ಧಾರವನ್ನು ಆಯಾ ರಾಜ್ಯಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಗೇ ಬಿಟ್ಟಿದೆ. ಕರೊನಾ ಸೋಂಕು ಇನ್ನೂ ಪ್ರಸರಣ ಆಗುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ವಲಯಗಳಲ್ಲಿ ರಾತ್ರಿ ಕರ್ಪ್ಯೂ ಸೇರಿ ಮತ್ತಿತರ ನಿರ್ಬಂಧಗಳನ್ನು ಹೇರಬಹುದು.
ಆದರೆ ಕಂಟೇನ್ಮೆಂಟ್ ಝೋನ್ಗಳನ್ನು ಹೊರತುಪಡಿಸಿ ಬೇರೆಕಡೆಯಲ್ಲೂ ಲಾಕ್ಡೌನ್ ವಿಸ್ತರಣೆ ಮಾಡುವುದಿದ್ದರೆ ನಮ್ಮನ್ನು ಸಂಪರ್ಕಿಸಿ, ವಿವರಣೆ ನೀಡಬೇಕು ಎಂದು ಗೃಹ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಬಿಜೆಪಿ ಶಾಸಕಿ ಸಾವು; ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಓಂ ಬಿರ್ಲಾ ಸಂತಾಪ