ಸರ್ಕಾರಿ ಉದ್ಯೋಗ, ಕಂಟ್ರಾಕ್ಟ್ ಸಿಗದಿರುವುದಕ್ಕೆ ಟಾರ್ಗೆಟ್ ಹತ್ಯೆಗಳು? ಆದರೆ ಕೇಂದ್ರ ಸರ್ಕಾರ ತನ್ನ ಕೆಲಸ ನಿಲ್ಲಿಸಲ್ಲ ಎಂದಿದೆ
ಜಮ್ಮು ಕಾಶ್ಮೀರದಲ್ಲಿ ಈ ವರ್ಷದ ಆರಂಭದಿಂದ 18 ಮಂದಿ ಟಾರ್ಗೆಟ್ ಹತ್ಯೆಯಾಗಿದ್ದಾರೆ. ಕಾಶ್ಮೀರಿ ಪಂಡಿತರು, ವಲಸಿಗ ಕಾರ್ಮಿಕರು, ಶಿಕ್ಷಕಿ, ಪೊಲೀಸರನ್ನು ಗುರಿಯಾಗಿಸಿಕೊಂಡು ಉಗ್ರಗಾಮಿಗಳು ದಾಳಿ ನಡೆಸುತ್ತಿದ್ದಾರೆ. ಆದರೇ, ಟಾರ್ಗೆಟ್ ಹತ್ಯೆಯ ಹಿಂದಿನ ದುರುದ್ದೇಶ ಏನು? ಉಗ್ರಗಾಮಿಗಳು ಈಗ ಇದ್ದಕ್ಕಿದ್ದಂತೆ ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸಲು ಕಾರಣವೇನು? ಈ ಟಾರ್ಗೆಟ್ ಹತ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಹೇಳುವುದೇನು ಎನ್ನುವುದರ ವರದಿ ಇಲ್ಲಿದೆ ನೋಡಿ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಹಿಂದೂಗಳು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಹತ್ಯೆ ಮಾಡುವುದರಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರವು ತನ್ನ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಕಾಶ್ಮೀರದಲ್ಲಿ ಟಾರ್ಗೆಟ್ ಹತ್ಯೆಗಳು ಹತಾಶೆಯ ಮಟ್ಟವನ್ನು ತೋರಿಸುತ್ತವೆ. ನಮ್ಮ ವ್ಯವಸ್ಥೆಯು ಇದನ್ನು ನೋಡಿಕೊಳ್ಳುತ್ತದೆ. ಈ ಹತ್ಯೆಯ ಸರಮಾಲೆ ನಿಲ್ಲುತ್ತದೆ. ಇದು ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಸಂಭವಿಸಿದೆ,” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹೇಳಿಕೆಯು ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚಾಗಿ ಸ್ಥಳೀಯರಲ್ಲದವರು ಮತ್ತು ಕಾಶ್ಮೀರಿ ಪಂಡಿತರನ್ನು ಗುರಿ ಯಾಗಿಸಿಕೊಂಡಿರುವ ದಾಳಿಗಳ ಸರಣಿಯನ್ನು ನಿಭಾಯಿಸುವ ಸರ್ಕಾರದ ಯೋಜನೆಯ ಬಗ್ಗೆ ಕೆಲವು ಒಳನೋಟವನ್ನು ನೀಡಿತು. “ಪ್ರವಾಸಿಗರು, ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡರೆ ಕೊಲ್ಲಬಹುದು. ಯಾರಾದರೂ ದಾಳಿಗೆ ಒಳಗಾಗಬಹುದು. ಉಗ್ರರು ಮುಂದೆ ಮುಸ್ಲಿಮರನ್ನೂ ಗುರಿಯಾಗಿಸುತ್ತಾರೆ” ಎಂದು ಅಧಿಕಾರಿ ಹೇಳಿದರು.
ಈ ಮೊದಲು ಕಾಶ್ಮೀರದಲ್ಲಿ ಉದ್ಯೋಗ, ಸರ್ಕಾರಿ ಕಂಟ್ರಾಕ್ಟ್ ಕೆಲ ವಿಶೇಷ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೇ, ಈಗ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಇದರಿಂದ ಹತಾಶರಾದ ಉಗ್ರಗಾಮಿಗಳು ಸರ್ಕಾರಿ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ವಿಫಲಗೊಳಿಸಲು ಸರ್ಕಾರಿ ನೌಕರರ ಟಾರ್ಗೆಟ್ ಹತ್ಯೆ ಮಾಡಲಾಗುತ್ತಿದೆ. ಉನ್ನತ ಮಟ್ಟದ ವ್ಯಕ್ತಿಗಳಿಗೆ ಹೆಚ್ಚಿನ ಭದ್ರತೆ ಇರುವ ಕಾರಣದಿಂದ ಅಂಥವರನ್ನು ಹತ್ಯೆ ಮಾಡಲಾಗುತ್ತಿಲ್ಲ. ಹೀಗಾಗಿ ವಲಸಿಗ ಕಾರ್ಮಿಕರು, ಸರ್ಕಾರಿ ನೌಕರರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ. ಈ ಮೂಲಕ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಭಯ, ಭೀತಿ ಹುಟ್ಟಿಸುವ ಸಂಚು ಅಡಗಿದೆ. ಕಾಶ್ಮೀರದ ಶಾಂತಿಯನ್ನು ಕದಡುವ ಕುತಂತ್ರ ಈ ಟಾರ್ಗೆಟ್ ಹತ್ಯೆಗಳ ಹಿಂದೆ ಇದೆ.
ಈ ಹಿಂದೆ ಸರ್ಕಾರಿ ಕಚೇರಿ, ಅಂಗಡಿಗಳನ್ನು ಉಗ್ರರು ಟಾರ್ಗೆಟ್ ಮಾಡುತ್ತಿರಲಿಲ್ಲ. ಆದರೇ, ಈಗ ಸರ್ಕಾರಿ ಕಚೇರಿ, ಅಂಗಡಿಗಳನ್ನ ಟಾರ್ಗೆಟ್ ಮಾಡಿ ಹಿಂದೂ ಜನರನ್ನು ಹತ್ಯೆ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ 2 ಸಾವಿರ ಕಾಶ್ಮೀರ ಪಂಡಿತರು ಕಾಶ್ಮೀರ ಬಿಟ್ಟು ಜಮ್ಮು ಹಾಗೂ ದೇಶದ ಉಳಿದ ಭಾಗಗಳಿಗೆ ವಲಸೆ ಹೋಗಿದ್ದಾರೆ.
ಕಾಶ್ಮೀರದಲ್ಲಿ ಪ್ರಧಾನಿ ಪ್ಯಾಕೇಜ್ ಹಾಗೂ ಪುನರ್ ವಸತಿ ಪ್ಯಾಕೇಜ್ ನಡಿ ಕಾಶ್ಮೀರಿ ಪಂಡಿತರಿಗೆ ಉದ್ಯೋಗ ಸೇರಿದಂತೆ ಇತರೆ ನೆರವು ನೀಡಲಾಗುತ್ತಿದೆ. ಇದನ್ನು ಉಗ್ರಗಾಮಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಶ್ಮೀರಿ ಪಂಡಿತರು, ಸರ್ಕಾರಿ ನೌಕರರು, ಪೊಲೀಸರು, ಸಿಖ್ಖರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿದ್ದಾರೆ.
ಕಾಶ್ಮೀರಿ ಪಂಡಿತರು ತಮ್ಮ ಕಾಲೋನಿಗಳ ಮೇಲಿನ ಲಾಕ್‌ಡೌನ್‌ಗಳನ್ನು ತೆಗೆದುಹಾಕಲು ಮತ್ತು ಕಾಶ್ಮೀರದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಡುವ ಬೇಡಿಕೆಗಳನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು “ನಾವು ಕಾಶ್ಮೀರಿ ಪಂಡಿತರನ್ನು ಜಮ್ಮುವಿಗೆ ವರ್ಗಾಯಿಸುವುದಿಲ್ಲ. ನಾವು ಯಾವುದೇ ಜನಾಂಗೀಯ ಶುದ್ಧೀಕರಣದ ಭಾಗವಾಗಲು ಸಾಧ್ಯವಿಲ್ಲ. ನಾವು ಬಹುಸಂಸ್ಕೃತಿಯ ಸಮಾಜವನ್ನು ನಂಬುತ್ತೇವೆ. . ಸುರಕ್ಷಿತ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತರನ್ನು ನಾವು ಸ್ಥಳಾಂತರಿಸುತ್ತೇವೆ.”
ಚುನಾವಣಾ ಆಯೋಗ ನಿರ್ಧರಿಸಿದಾಗಲೆಲ್ಲಾ ಚುನಾವಣೆಗಳು ನಡೆಯುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅಲ್ಲಿ ಇಲ್ಲಿ ಕೆಲವರು ಹತ್ಯೆ ಮಾಡುವುದರಿಂದ ನಮಗೆ ಹಿನ್ನಡೆಯಾಗುವುದಿಲ್ಲ’ ಎಂದು ಸರ್ಕಾರವು ಚುನಾವಣೆ ನಡೆಸಲು ಉತ್ಸುಕವಾಗಿದೆ ಎಂದು ಹೇಳಿದರು.
“ತಾಲಿಬಾನ್ ಈ ದಾಳಿಯ ಹಿಂದೆ ಇರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಇದು ಜಿಹಾದ್ ಅಲ್ಲ. ಇದನ್ನು ಕೆಲವು ಉಗ್ರಗಾಮಿಗಳು ಮಾಡಿದ್ದಾರೆ. ಈ ಎಲ್ಲಾ ದಾಳಿಗಳ ಹಿಂದೆ ಪಾಕಿಸ್ತಾನವಿದೆ. ಅವ್ಯವಸ್ಥೆಯನ್ನು ಸೃಷ್ಟಿಸುವ ಪ್ರಯತ್ನವಿದೆ” ಎಂದು ಅಧಿಕಾರಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಪಕ್ಷಗಳನ್ನು ಉಲ್ಲೇಖಿಸಿ, “ತಾವು ಮಾತ್ರ ರಾಜ್ಯವನ್ನು ನಡೆಸಬಹುದು ಮತ್ತು ಹಳೆಯ ವ್ಯವಸ್ಥೆಗೆ ಮರಳಬಹುದು ಎಂಬ ನಿರೂಪಣೆಯನ್ನು ರಚಿಸಲು ಪ್ರಯತ್ನಿಸುತ್ತಿರುವ ಜನರ ಸಣ್ಣ ಗುಂಪು ನಮಗೆ ಬೇಡ” ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೇ, ಜಮ್ಮು ಕಾಶ್ಮೀರದಲ್ಲಿ 2010 ರಿಂದ 2019ರವರೆಗೆ ಕಾಶ್ಮೀರಿ ಪಂಡಿತರ ಹತ್ಯೆಯಾಗಿಲ್ಲ. ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಳಿಕ 18 ಕಾಶ್ಮೀರಿ ಪಂಡಿತರು, ಹಿಂದೂಗಳ ಹತ್ಯೆಯಾಗಿದೆ ಎನ್ನುವುದನ್ನು ಗಮನಿಸಬೇಕು. ಹಾಗಂತ ಈಗ ಕೇಂದ್ರ ಸರ್ಕಾರವು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಸಿದ್ದವಿಲ್ಲ. ಕಾಶ್ಮೀರದ ರಾಜಕೀಯ ಪಕ್ಷಗಳು ಈಗಲೂ ಕಾಶ್ಮೀರಕ್ಕೆ ಮೊದಲಿನ ವಿಶೇಷ ಸ್ಥಾನಮಾನ ನೀಡಬೇಕೆಂದು ಪಟ್ಟು ಹಿಡಿದಿವೆ.
ಕಾಶ್ಮೀರದಲ್ಲಿ ಹಿಂದೂ ಸಮುದಾಯದ ಓರ್ವ ಬ್ಯಾಂಕ್ ಮ್ಯಾನೇಜರ್ ಮತ್ತು ಒಬ್ಬ ಕಾರ್ಮಿಕನನ್ನು ಗುಂಡಿಕ್ಕಿ ಕೊಂದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ. ಟಾರ್ಗೆಟ್ ಹತ್ಯೆಗಳು ಹೆಚ್ಚು ಹಿಂದೂ ಕುಟುಂಬಗಳನ್ನು ಜಮ್ಮು ಕಾಶ್ಮೀರದಿಂದ ಪಲಾಯನ ಮಾಡಲು ಪ್ರೇರೇಪಿಸಿವೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ಎಲ್ಲಕ್ವಾಯ್ ದೇಹತಿ ಬ್ಯಾಂಕ್‌ನ ಶಾಖೆಯೊಳಗೆ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದು, ಮಂಗಳವಾರ ಶಾಲಾ ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
Published On - 7:20 pm, Fri, 3 June 22