AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inside Story | ಸೆಂಟ್ರಲ್ ವಿಸ್ತಾ ನಂತರ ಟಾಟಾ ಪಾಲಾಗುವುದೇ ಏರ್ ಇಂಡಿಯಾ?

ದೇಶದ ಒಂದೊಂದೇ ಸರ್ಕಾರಿ ಸಂಸ್ಥೆಗಳು ಖಾಸಗೀಕರಣದ ಹಾದಿ ಹಿಡಿಯುತ್ತಿವೆ. ಈಗ ದೇಶದ ಹೆಮ್ಮೆಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಖಾಸಗೀಕರಣದತ್ತ ಮುಖ ಮಾಡಿದೆ. ಏರ್ ಇಂಡಿಯಾ ಖರೀದಿಸಲು ಟಾಟಾ ಸನ್ಸ್ ಆಸಕ್ತಿ ತೋರಿಸಿದೆ.

Inside Story | ಸೆಂಟ್ರಲ್ ವಿಸ್ತಾ ನಂತರ ಟಾಟಾ ಪಾಲಾಗುವುದೇ ಏರ್ ಇಂಡಿಯಾ?
ಸಾಂದರ್ಭಿಕ ಚಿತ್ರ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 14, 2020 | 2:55 PM

ದೇಶದ ಒಂದೊಂದೇ ಸರ್ಕಾರಿ ಸಂಸ್ಥೆಗಳು ಖಾಸಗೀಕರಣದ ಹಾದಿ ಹಿಡಿಯುತ್ತಿವೆ. ಈಗ ದೇಶದ ಹೆಮ್ಮೆಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಖಾಸಗೀಕರಣದತ್ತ ಮುಖ ಮಾಡಿದೆ. ಖಾಸಗೀಕರಣಗೊಳ್ಳದಿದ್ದರೆ ಏರ್ ಇಂಡಿಯಾ ತನ್ನ ಹಾರಾಟ ನಿಲ್ಲಿಸಬೇಕಾಗುತ್ತದೆ ಎಂದು ಈಗಾಗಲೇ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿಕೆ ನೀಡಿದ್ದಾರೆ. ಇಂದು (ಡಿ.15) ಸಂಜೆ ಸಂಜೆ 5 ಘಂಟೆಯೊಳಗೆ ಆಸಕ್ತರು ಏರ್ ಇಂಡಿಯಾದ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.

ಯಾರ ಪಾಲಾಗಲಿದೆ ಗಗನಯಾನ ದೈತ್ಯ? ಇತ್ತೀಚಿಗೆ ವಿಮಾನ ಯಾನ ಕ್ಷೇತ್ರ ಬೆಂದು ಬಸವಳಿಯುತ್ತಿದೆ ಎಂಬ ವಿಶ್ಲೇಷಣೆಗಳು ಹೆಚ್ಚುತ್ತಿವೆ. ಕೊರೊನೋತ್ತರ ದಿನಗಳಲ್ಲಿ ಈ ಅಪಾಯದ ಹೆಚ್ಚಳವಾಗುವ ಸಾಧ್ಯತೆಯೇ ಕಂಡುಬರುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ, ಏರ್ ಇಂಡಿಯಾ ಖರೀದಿಸಲು ಟಾಟಾ ಸನ್ಸ್ ಆಸಕ್ತಿ ತೋರಿದೆ. ಇತ್ತೀಚಿಗಷ್ಟೇ ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿ ಟಾಟಾ ಗ್ರೂಪ್​ನ ಪಾಲಾಗಿತ್ತು. ಇದೀಗ ಏರ್ ಇಂಡಿಯಾವೂ ಟಾಟಾ ಪಾಲಾಗುವ ಸಾಧ್ಯತೆಗಳು ದಟ್ಟವಾಗಿವೆ.

ಈ ಕುರಿತು ತನ್ನ ಪಾಲುದಾರ ಸಂಸ್ಥೆ ಏರ್ ಸಿಂಗಾಪೂರದ ಮನವೊಲಿಸಲು ಟಾಟಾ ಸನ್ಸ್ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ವರದಿಯೊಂದರ ಪ್ರಕಾರ 2021ನೇ ವೈಮಾನಿಕ ವರ್ಷದಲ್ಲಿ ಏರ್ ಇಂಡಿಯಾಗೆ ಆದ ನಷ್ಟ 21 ಸಾವಿರ ಕೋಟಿ. 2021ರಿಂದ 2023ರವರೆಗೆ ತನ್ನೆಲ್ಲ ಸಾಲ, ನಷ್ಟದಿಂದ ಹೊರಬರಲು 37 ಸಾವಿರ ಕೋಟಿ ಹಣದ ಅಗತ್ಯ ಏರ್ ಇಂಡಿಯಾಕ್ಕಿದೆ. ಹೀಗಾಗಿ, ಟಾಟಾ ಸನ್ಸ್ ಹರಾಜು ಕೂಗಲಿರುವ ಮೊತ್ತದ ಕುರಿತೂ ಕುತೂಹಲ ಮೂಡಿದೆ.

ಏರ್ ಇಂಡಿಯಾ ಸಿಬ್ಬಂದಿಗಳೇ ಖರೀದಿಸಲಿದ್ದಾರಾ!? ಇನ್ನೊಂದು ವರದಿಯೊಂದರ ಪ್ರಕಾರ, ಏರ್ ಇಂಡಿಯಾದ 207 ಸಿಬ್ಬಂದಿ ಖಾಸಗಿ ಈಕ್ವಿಟಿ ಫಂಡ್​ ಒಂದರ ಪಾಲುದಾರಿಕೆಯಲ್ಲಿ ಬಿಡ್ ಕೂಗಲು ಆಸಕ್ತಿ ತೋರಿಸಿದ್ದಾರೆ. 207 ಸಿಬ್ಬಂದಿ ತಲಾ ₹ 1 ಲಕ್ಷ ಹೂಡಿಕೆ ಮಾಡಿ, ಉಳಿದ ಮೊತ್ತವನ್ನು ಖಾಸಗಿ ಸಂಸ್ಥೆ ಭರಿಸುವ ಸಾಧ್ಯತೆಯೂ ಇದೆ. ಈ ಪ್ರಕ್ರಿಯೆಯ ಮುಂದಾಳತ್ವ ವಹಿಸಿರುವ ಏರ್ ಇಂಡಿಯಾದ ವಾಣಿಜ್ಯ ನಿರ್ದೇಶಕಿ ಮೀನಾಕ್ಷಿ ಮಲ್ಲಿಕ್, ಬೃಹತ್ ಕಾರ್ಪೊರೇಟ್ ಸಂಸ್ಥೆಗಳೆದುರು ನಾವು ಬಿಡ್ ಸಲ್ಲಿಸಲಿದ್ದೇವೆಂದು ತಿಳಿದಿದೆ. ಆದರೂ, ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆಂದು ಹೇಳಿದ್ದಾರೆ. 207 ಸಿಬ್ಬಂದಿಗಳ ಒಕ್ಕೂಟ ಶೇ 51 ಮತ್ತು ಈಕ್ವಿಟಿ ಫಂಡ್ ಶೇ 49 ಶೇರು ಹಂಚಿಕೆಯಲ್ಲಿ ಬಿಡ್ ಸಲ್ಲಿಸಲು ಆಸಕ್ತಿ ವಹಿಸಿವೆ. ಒಟ್ಟಿನಲ್ಲಿ ದೇಶದ ಹೆಮ್ಮೆಯ ಏರ ಇಂಡಿಯಾ ಯಾರ ಪಾಲಾಗಲಿದೆ ಎಂಬುದು ಸಂಜೆಯೊಳಗೆ ತಿಳಿಯುವ ಸಾಧ್ಯತೆಯಿದೆ.

ಈವರೆಗೆ ದೇಶಕ್ಕೆ ಸೇವೆ ಸಲ್ಲಿಸಿದ ಒಂದೊಂದೇ ಸಂಸ್ಥೆಗಳು ಖಾಸಗಿ ಕಂಪನಿಗಳ ವಶಕ್ಕೆ ಸೇರುವ ಪ್ರಕ್ರಿಯೆಗೆ ಏರ್ ಇಂಡಿಯಾ ಸಹ ಸೇರ್ಪಡೆಯಾಗಿದೆ. ಇತ್ತೀಚಿಗಷ್ಟೇ ಖಾಸಗಿ ರೈಲುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Published On - 2:55 pm, Mon, 14 December 20