
ಮುಂಬೈ, ಜುಲೈ 19: ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ AI-171 ಅಪಘಾತದ (Air India Plane Crash) ಸಂತ್ರಸ್ತರಿಗಾಗಿ ಟಾಟಾ ಸನ್ಸ್ (Tata Sons) ಶುಕ್ರವಾರ ಮುಂಬೈನಲ್ಲಿ ‘ದಿ AI-171 ಮೆಮೋರಿಯಲ್ ಆ್ಯಂಡ್ ವೆಲ್‌ಫೇರ್ ಟ್ರಸ್ಟ್ (The AI-171 Memorial and Welfare Trust)’ ಸ್ಥಾಪಿಸಿದೆ. ಟ್ರಸ್ಟ್‌ನ ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಇದರ ಮೂಲಕ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು, ಗಾಯಗೊಂಡವರು ಮತ್ತು ಈ ದುರಂತದಿಂದ ಬಾಧಿತರಾದ ಎಲ್ಲರಿಗೂ ಸಹಾಯ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಈ ಸಹಾಯವು ತಕ್ಷಣದ ಮತ್ತು ದೀರ್ಘಾವಧಿಯದ್ದಾಗಿರುತ್ತದೆ ಎಂಬುದನ್ನೂ ಸಂಸ್ಥೆ ತಿಳಿಸಿದೆ.
ಮೃತರಿಗೆ 1 ಕೋಟಿ ರೂ., ಗಾಯಾಳುಗಳಿಗೆ ಚಿಕಿತ್ಸೆ, ಹಾಸ್ಟೆಲ್ ಪುನರ್ನಿರ್ಮಾಣ ಕಾರ್ಯವನ್ನು ಟ್ರಸ್ಟ್ ನೆರವೇರಿಸಿಕೊಡಲಿದೆ. ಈ ಟ್ರಸ್ಟ್‌ಗೆ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್‌ಗಳು ಒಟ್ಟಾಗಿ ಒಟ್ಟು 500 ಕೋಟಿ ರೂ.ಗಳನ್ನು ಕೊಡುಗೆಯಾಗಿ ನೀಡಲಿವೆ. ಎರಡೂ ಸಂಸ್ಥೆಗಳು ತಲಾ 250 ಕೋಟಿ ರೂ.ಗಳನ್ನು ನೀಡಲಿವೆ. ಟ್ರಸ್ಟ್‌ನ ಹಣವನ್ನು ಮೃತರ ಕುಟುಂಬಗಳಿಗೆ 1 ಕೋಟಿ ರೂ.ಗಳ ಪರಿಹಾರ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಬಳಸಲಾಗುತ್ತದೆ. ಅಪಘಾತದಲ್ಲಿ ಹಾನಿಗೊಳಗಾದ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಅನ್ನು ಸಹ ಟ್ರಸ್ಟ್ ಪುನರ್ನಿರ್ಮಿಸಲಿದೆ.
ಟ್ರಸ್ಟ್‌ನ ಆಡಳಿತವನ್ನು ಐದು ಸದಸ್ಯರ ಮಂಡಳಿಯು ನೋಡಿಕೊಳ್ಳುತ್ತದೆ. ಪ್ರಸ್ತುತ, ಇಬ್ಬರು ಟ್ರಸ್ಟಿಗಳನ್ನು ನೇಮಿಸಲಾಗಿದೆ. ಟಾಟಾ ಗ್ರೂಪ್ ತನ್ನ ಮಾಜಿ ಹಿರಿಯ ಅಧಿಕಾರಿ ಎಸ್ ಪದ್ಮನಾಭನ್, ಟಾಟಾ ಸನ್ಸ್ ಜನರಲ್ ಕೌನ್ಸೆಲ್ ಸಿದ್ಧಾರ್ಥ್ ಶರ್ಮಾ ಅವರನ್ನು ಟ್ರಸ್ಟಿಗಳಾಗಿ ನೇಮಿಸಿದೆ. ಉಳಿದ ಮೂವರು ಟ್ರಸ್ಟಿಗಳನ್ನು ಶೀಘ್ರದಲ್ಲೇ ನೇಮಿಸಲಾಗುವುದು. ಟ್ರಸ್ಟ್‌ನ ಪೂರ್ಣ ಕಾರ್ಯಾಚರಣೆಗಾಗಿ ತೆರಿಗೆ ನೋಂದಣಿ ಮತ್ತು ಇತರ ಔಪಚಾರಿಕತೆಗಳು ನಡೆಯುತ್ತಿವೆ ಎಂದು ಸಂಸ್ಥೆ ತಿಳಿಸಿದೆ.
ಈ ಟ್ರಸ್ಟ್ ಕೇವಲ ಸಂತ್ರಸ್ತರಿಗೆ ಸೀಮಿತವಾಗಿರದೆ, ಅಪಘಾತದ ನಂತರ ಸೇವೆಗಳನ್ನು ಒದಗಿಸಿದ ಪ್ರಥಮ ಚಿಕಿತ್ಸೆ ನೀಡುವವರು, ವೈದ್ಯಕೀಯ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರಿಗೆ ಮಾನಸಿಕ, ಭಾವನಾತ್ಮಕ ಮತ್ತು ಇತರ ಬೆಂಬಲವನ್ನು ಒದಗಿಸಲಿದೆ.
ಇದನ್ನೂ ಓದಿ: Plane Crash: ಅಹಮದಾಬಾದ್ ವಿಮಾನ ಅಪಘಾತದ ವೇಳೆ ಹಾಸ್ಟೆಲ್ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು; ಹೊಸ ವಿಡಿಯೋ ಇಲ್ಲಿದೆ
ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ, ಅಪಘಾತಕ್ಕೀಡಾಗಿ ಹತ್ತಿರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿತ್ತು. ಈ ಅಪಘಾತದಲ್ಲಿ, ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಪ್ರಾಣ ಕಳೆದುಕೊಂಡಿದ್ದರು. ಇದಲ್ಲದೆ, ಕಟ್ಟಡದಲ್ಲಿ ವಾಸಿಸುತ್ತಿದ್ದ ಅನೇಕ ವೈದ್ಯರು ಮತ್ತು ನಾಗರಿಕರು ಸಾವನ್ನಪ್ಪಿದ್ದರು. ಈ ಅಪಘಾತದಲ್ಲಿ ಕನಿಷ್ಠ 275 ಜನರು ಸಾವನ್ನಪ್ಪಿದ್ದರು. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸಾವನ್ನಪ್ಪಿದವರಲ್ಲಿ ಒಬ್ಬರಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ