AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಕುಡಿಯೋ ಹರ್ಬಲ್​​ ಟೀ ನಿಜಕ್ಕೂ ಚಹಾವೇ?: FSSAI ಕೊಟ್ಟ ಸ್ಪಷ್ಟನೆ ಇಲ್ಲಿದೆ

ನಾವು ಚಹಾ ಎಂದು ಸೇವಿಸುವ ಉತ್ಪನ್ನಗಳ ಪೈಕಿ ನಿಜಕ್ಕೂ ಟೀ ಯಾವುದು ಎಂಬ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸ್ಪಷ್ಟನೆ ನೀಡಿದೆ. ಡಿಸೆಂಬರ್ 24ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಮಿಸ್​​ ಬ್ರ್ಯಾಂಡಿಂಗ್​​ ಮಾಡಿದಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006ರ ಪ್ರಕಾರ ಕ್ರಮ ಕೈಗೊಳ್ಳುವ ಬಗ್ಗೆ FSSAI ಎಚ್ಚರಿಸಿದೆ.

ನೀವು ಕುಡಿಯೋ ಹರ್ಬಲ್​​ ಟೀ ನಿಜಕ್ಕೂ ಚಹಾವೇ?: FSSAI ಕೊಟ್ಟ ಸ್ಪಷ್ಟನೆ ಇಲ್ಲಿದೆ
ಚಹಾ
ಪ್ರಸನ್ನ ಹೆಗಡೆ
|

Updated on: Dec 26, 2025 | 1:02 PM

Share

ನವದೆಹಲಿ, ಡಿಸೆಂಬರ್​​ 26: ಇಂದು ಮಾರುಕಟ್ಟೆಯಲ್ಲಿ ಬಗೆ ಬಗೆಯ ಟೀಗಳು ಲಭ್ಯವಿವೆ. ಫ್ಲೇವರ್ಡ್​​ ಚಹಾಗಳ ಚೊತೆಗೆ ಹರ್ಬಲ್ ಟೀಗಳಿಗೆ ಜನ ಮಾರು ಹೋಗುತ್ತಿದ್ದಾರೆ. ಆದರೆ ಇವೆಲ್ಲವನ್ನೂ ನಿಜಕ್ಕೂ ಟೀ ಎಂದು ಕರೆಯಬಹುದಾ? ಈ ಪ್ರಶ್ನೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಉತ್ತರಿಸಿದ್ದು, ಇವೆಲ್ಲವನ್ನು ಚಹಾ ಎನ್ನಲು ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ​​

FSSAI ಪ್ರಕಾರ, ಚಹಾ ಗಿಡದಿಂದ ಪಡೆಯಲಾಗುವ ಉತ್ಪನ್ನಗಳಿಂದ ತಯಾರಿಸಲ್ಪಟ್ಟವು ಮಾತ್ರ ಈ ವ್ಯಾಪ್ತಿಗೆ ಬರುತ್ತವೆ. ಕಾಂಗ್ರಾ ಚಹಾ ಮತ್ತು ಹಸಿರು ಚಹಾ ಸೇರಿದಂತೆ ಮುಂತಾದವುಗಳನ್ನು ಟೀ ಹೆಸರಲ್ಲಿ ಮಾರಾಟ ಮಾಡಬಹುದು. ಅದನ್ನು ಹೊರತುಪಡಿಸಿ ಇತರ ಯಾವುದೇ ಕಷಾಯಗಳು ಅಥವಾ ಪಾನೀಯಗಳು ಈ ಹೆಸರನ್ನು ಬಳಸುವಂತಿಲ್ಲ. ಡಿಸೆಂಬರ್ 24ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ಹಾಗೂ ಅದರ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳುವ ಬಗ್ಗೆ FSSAI ಎಚ್ಚರಿಸಿದೆ.

ಇದನ್ನೂ ಓದಿ: ಈ 7 ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು ಎಚ್ಚರ!

ಅಂಗಡಿಗಳು ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಹರ್ಬಲ್ ಟೀ, ಜಾಸ್ಮಿನ್ ಟೀ, ರೂಯಿಬೋಸ್ ಟೀ ಹಾಗೂ ಹೂವಿನ ಚಹಾಗಳ ಹೆಸರಿನಲ್ಲಿ ಟೀ ಪುಡಿ/ಸ್ಯಾಚೆಟ್ ಮಾರಾಟವಾಗುತ್ತಿವೆ. ಆದರೆ Camellia sinensisನಿಂದ ಉತ್ಪತ್ತಿಯಾಗದ ಹರ್ಬಲ್ ಇನ್ಫ್ಯೂಷನ್‌ಗಳು ಅಥವಾ ಮಿಶ್ರಣಗಳನ್ನು ‘ಚಹಾ’ ಎಂದು ಕರೆಯಲು ಆಗಲ್ಲ ಎಂದು FSSAI ತಿಳಿಸಿದ್ದು, ಇವುಗಳನ್ನು ಟೀ ಹೆಸರಲ್ಲಿ ಮಾರಾಟ ಮಾಡುವುದು ಮಿಸ್​​ ಬ್ರ್ಯಾಂಡಿಂಗ್​​ ಎಂದು ಹೇಳಿದೆ. ಈ ಆದೇಶವು ತಯಾರಿಕೆ, ಪ್ಯಾಕಿಂಗ್, ಆಮದು ಅಥವಾ ಮಾರಾಟದಲ್ಲಿ ತೊಡಗಿರುವ ಆಹಾರ ಉದ್ಯಮಿಗಳು ಹಾಗೂ ಇ-ಕಾಮರ್ಸ್ ವೇದಿಕೆಗಳಿಗೆ ಅನ್ವಯವಾಗಲಿದೆ. ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರು ಹಾಗೂ FSSAIಯ ಪ್ರಾದೇಶಿಕ ನಿರ್ದೇಶಕರು ಈ ನಿಯಮಗಳ ಪಾಲನೆ ಜೊತೆಗೆ ಮೇಲ್ವಿಚಾರಣೆ ಮಾಡುವಂತೆಯೂ ಸೂಚಿಸಲಾಗಿದೆ.

ಆಹಾರ ವಸ್ತುಗಳ ತಪ್ಪು ಬ್ರ್ಯಾಂಡಿಂಗ್​​ ಬಗ್ಗೆ ಇತ್ತೀಚೆಗೆ FSSAI ನೀಡಿರುವ ಎರಡನೇ ಎಚ್ಚರಿಕೆ ಇದಾಗಿದೆ. ಹಣ್ಣು ಆಧಾರಿತ, ಕಾರ್ಬೊನೇಟ್ ರಹಿತ ಅಥವಾ ರೆಡಿ-ಟು-ಡ್ರಿಂಕ್ ಪಾನೀಯಗಳಂತಹ ಆಹಾರ ಉತ್ಪನ್ನಗಳನ್ನು ‘ORS’ ಹೆಸರಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಅಕ್ಟೋಬರ್‌ನಲ್ಲಿ ಆದೇಶಿಸಲಾಗಿತ್ತು. ಇವುಗಳ ಮಾರಾಟಕ್ಕೆ ಕಡಿವಾಣ ಹಾಕಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಆಯುಕ್ತರಿಗೆ ನಿಯಂತ್ರಕ ಪ್ರಾಧಿಕಾರ ಪತ್ರ ಬರೆದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.