ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು; ಕೆಲವೇ ಹೊತ್ತಲ್ಲಿ ಎಂಆರ್ಐ, ಸಿಟಿ ಸ್ಕ್ಯಾನ್
68 ವರ್ಷದ ಕೆಸಿಆರ್ ಅವರು ಕಳೆದ ಕೆಲವು ದಿನಗಳಿಂದ ಒಂದರ ಬೆನ್ನಿಗೆ ಒಂದು ಕೆಲಸದಲ್ಲಿ ತೊಡಗಿಕೊಂಡಿದ್ದರು. ಫೆಡರಲ್ ಫ್ರಂಟ್ ರಚನೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಂಬೈ, ದೆಹಲಿ, ಜಾರ್ಖಂಡಗಳಿಗೆ ಪ್ರವಾಸ ಮಾಡಿದ್ದರು.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K Chandrashekhar Rao) ಅವರ ಎಡಗೈನಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೈದರಾಬಾದ್ನ ಯಶೋದಾ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಆಂಜಿಯೋಗ್ರಾಂ ಪರೀಕ್ಷೆ ನಡೆಸಿದ್ದಾಗಿ ವರದಿಯಾಗಿದೆ. ಕೆಸಿಆರ್ ಹೃದಯದಲ್ಲಿ ಯಾವುದೇ ಬ್ಲಾಕ್ಗಳು ಕಂಡು ಬಂದಿಲ್ಲ. ಸಿಎಂಗೆ ಇನ್ನು ಕೆಲವೇ ಹೊತ್ತಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸ್ಕ್ಯಾನ್ಗಳನ್ನೂ ಮಾಡಲಾಗುವುದು ಎಂದು ಕೆಸಿಆರ್ ವೈಯಕ್ತಿಕ ಡಾಕ್ಟರ್ ಎಂ.ವಿ.ರಾವ್ ತಿಳಿಸಿದ್ದಾರೆ. ಪ್ರತಿವರ್ಷ ಫೆಬ್ರವರಿಯಲ್ಲಿ ಕೆ.ಚಂದ್ರಶೇಖರ್ ರಾವ್ ಅವರಿಗೆ ನಾವು ಎಲ್ಲ ರೀತಿಯ ಆರೋಗ್ಯ ತಪಾಸಣೆಯನ್ನೂ ಮಾಡುತ್ತೇವೆ. ಸದ್ಯ ಅವರ ಎಡ ಕೈ ಮತ್ತು ಕಾಲುಗಳಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಹೀಗಾಗಿ ಇನ್ನಷ್ಟು ತಪಾಸಣೆಯ ಅಗತ್ಯವಿದೆ. ಸದ್ಯ ಅವರ ಆರೋಗ್ಯದಲ್ಲಿ ದೊಡ್ಡ ಸಮಸ್ಯೆಯೇನೂ ಕಾಣಿಸಿಕೊಂಡಿಲ್ಲ. ವರದಿಯನ್ನು ಆಧರಿಸಿ ಚಿಕಿತ್ಸೆ ಶುರು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಯಶೋದಾ ಆಸ್ಪತ್ರೆಗೆ ದಾಖಲಾದ ಬಗ್ಗೆ ಮುಖ್ಯಮಂತ್ರಿ ಕಚೇರಿ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. ಎಡಗೈಯಲ್ಲಿ ತೀವ್ರ ನೋವಿರುವ ಕಾರಣ ವೈದ್ಯರು ಹೃದಯಕ್ಕೆ ಸಂಬಂಧಪಟ್ಟ ಕೆಲವು ಪರೀಕ್ಷೆಗಳನ್ನೂ ನಡೆಸುತ್ತಿದ್ದಾರೆ. ಕೆಸಿಆರ್ ಜತೆ ಅವರ ಕುಟುಂಬದವರು ಇದ್ದಾರೆ. ಇಂದು ಅವರು ಯಾದಾದ್ರಿ ದೇವಾಲಯಕ್ಕೆ ಭೇಟಿ ಕೊಡಬೇಕಿತ್ತು. ಆದರೆ ಸ್ವಲ್ಪ ಮಟ್ಟಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅದನ್ನು ರದ್ದುಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
68 ವರ್ಷದ ಕೆಸಿಆರ್ ಅವರು ಕಳೆದ ಕೆಲವು ದಿನಗಳಿಂದ ಒಂದರ ಬೆನ್ನಿಗೆ ಒಂದು ಕೆಲಸದಲ್ಲಿ ತೊಡಗಿಕೊಂಡಿದ್ದರು. ಫೆಡರಲ್ ಫ್ರಂಟ್ ರಚನೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಂಬೈ, ದೆಹಲಿ, ಜಾರ್ಖಂಡಗಳಿಗೆ ಪ್ರವಾಸ ಮಾಡಿದ್ದರು. ದೆಹಲಿಗೆ ಹೋಗುವುದಕ್ಕೆ ಮೊದಲು ಕಣ್ಣಿನ ತಪಾಸಣೆಗೆ ಒಳಗಾಗಿದ್ದರು. ಹೀಗೆ ಒಂದರ ಬೆನ್ನಿಗೆ ಮತ್ತೊಂದು ಪ್ರವಾಸ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಆರೋಗ್ಯದಲ್ಲೂ ಏರುಪೇರಾಗಿದೆ. ಹೆಚ್ಚಿನ ಒತ್ತಡದಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ನಿಮ್ಮ ನಾಯಕರು ಯಾರು ಸ್ವಾಮಿ? ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದ್ದೀರಿ: ಸಿದ್ದರಾಮಯ್ಯಗೆ ಯಡಿಯೂರಪ್ಪ ಟಾಂಗ್
Published On - 12:55 pm, Fri, 11 March 22