
ಚೆನ್ನೈ, ಮೇ 10: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಆಳಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದ್ವಿಪಕ್ಷೀಯ ಪ್ರಭುತ್ವವನ್ನು ಅಂತ್ಯಗೊಳಿಸಿ, ನಟ ದಳಪತಿ ವಿಜಯ್ (Thalapathy Vijay) ಇಂದು ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇದು ಕೇವಲ ಅಧಿಕಾರ ಬದಲಾವಣೆಯಲ್ಲ, ಒಂದು ಹೊಸ ರಾಜಕೀಯ ಯುಗದ ಆರಂಭವಾಗಿದೆ.
ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಟಿ ತ್ರಿಶಾ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾರಂತಹ ದಿಗ್ಗಜರು ಆಳಿದ ನೆಲದಲ್ಲಿ ಈಗ ವಿಜಯ್ ಅವರ ಆಡಳಿತ ಶುರುವಾಗಿದೆ.
ವಿಜಯ್ ಅವರ ರಾಜಕೀಯ ಪಯಣವು ಅವರ ಸಿನಿಮಾಗಳಂತೆಯೇ ರೋಚಕವಾಗಿದೆ. ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವನ್ನು ಕಟ್ಟಿ, ಹಳೆ ಮದ್ರಾಸ್‌ನ ರಾಜಕೀಯ ಸಂಪ್ರದಾಯಗಳನ್ನು ಭೇದಿಸುವುದು ಅಷ್ಟು ಸುಲಭವಾಗಿರಲಿಲ್ಲ. 2026ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರವೂ ಅಧಿಕಾರ ಹಿಡಿಯಲು ಅವರು ಹತ್ತಾರು ಕಾನೂನು ಮತ್ತು ರಾಜಕೀಯ ಅಡೆತಡೆಗಳನ್ನು ಎದುರಿಸಬೇಕಾಯಿತು. ಜನಸಾಮಾನ್ಯರ ಧ್ವನಿಯಾಗಿ ಹೋರಾಡಿದ ವಿಜಯ್, ಅಂತಿಮವಾಗಿ ಭವ್ಯ ಗೆಲುವಿನ ಮೂಲಕ ‘ಸಿಎಂ ವಿಜಯ್’ ಆಗಿ ಹೊರಹೊಮ್ಮಿದ್ದಾರೆ.
ಸುಮಾರು ಏಳು ದಶಕಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ಬಲಿಷ್ಠ ದ್ರಾವಿಡ ಪಕ್ಷಗಳ ಎದುರು ಚುನಾವಣಾ ಕಣಕ್ಕೆ ಇಳಿದ ವಿಜಯ್, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಗೆಲುವು ಸುಲಭವಾಗಿ ಸಿಕ್ಕಿದ್ದಲ್ಲ. ಚುನಾವಣೆಯಲ್ಲಿ ಒಟ್ಟು 234 ಕ್ಷೇತ್ರಗಳ ಪೈಕಿ ಬಹುಮತಕ್ಕೆ ಬೇಕಾದ 118ರ ಗಡಿ ದಾಟಲು ವಿಜಯ್ ಪ್ರತಿ ಹಂತದಲ್ಲೂ ಹೋರಾಡಬೇಕಾಯಿತು. ಕೊನೆಗೂ ಮ್ಯಾಜಿಕ್ ಸಂಖ್ಯೆ ಪಡೆದ ಅವರು, ಇಂದು ಅಕ್ಷರಶಃ ‘ದಳಪತಿ’ ಎನಿಸಿಸಿಕೊಂಡಿದ್ದಾರೆ.
ಇದನ್ನೂ ಓದಿ Thalapathy Vijay Oath Taking Live: ತಮಿಳುನಾಡಿನ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ ನೇರಪ್ರಸಾರ
ವಿಜಯ್ ಅವರೊಂದಿಗೆ ಒಂಬತ್ತು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಚಿವರ ಪಟ್ಟಿ ಇಲ್ಲಿದೆ:
ಟಿವಿಕೆ (TVK) ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ (DCM) ಹುದ್ದೆಯ ಕುರಿತು ತೀವ್ರ ಚರ್ಚೆಗಳು ನಡೆದಿದ್ದವು. ಮೈತ್ರಿ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ಹಲವು ನಾಯಕರು ಡಿಸಿಎಂ ಹುದ್ದೆಗಾಗಿ ಬೇಡಿಕೆಯಿಟ್ಟಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇವಲ ಮುಖ್ಯಮಂತ್ರಿ ಮತ್ತು ಒಂಬತ್ತು ಸಚಿವರು ಮಾತ್ರ ಪ್ರಮಾಣವಚನ ಸ್ವೀಕರಿಸುವ ಮೂಲಕ ಈ ಎಲ್ಲಾ ವದಂತಿಗಳಿಗೆ ವಿಜಯ್ ಪೂರ್ಣವಿರಾಮ ಹಾಕಿದ್ದಾರೆ. ಪ್ರಸ್ತುತ ಸರ್ಕಾರದಲ್ಲಿ ಯಾವುದೇ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದ್ದು, ದಳಪತಿ ವಿಜಯ್ ಅವರು ಒಬ್ಬರೇ ಸಾರಥಿಯಾಗಿ ತಮಿಳುನಾಡನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರು ಮೇ 13ರೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ತಮಿಳುನಾಡು ಇನ್ನು ಮುಂದೆ ‘ದಳಪತಿ’ಯ ಆಡಳಿತದಲ್ಲಿ ಹೊಸ ದಿಕ್ಕಿನತ್ತ ಸಾಗಲಿದ್ದು, ಜನರ ನಿರೀಕ್ಷೆಗಳು ಗಗನಕ್ಕೇರಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:17 am, Sun, 10 May 26