ದೇಶಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಸರಿಯಾದ ಅನುಷ್ಠಾನವಾಗಿದೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಹಾಯವಾಣಿ ಪ್ರಾರಂಭ ಮಾಡಲಿದೆ. ಈ ಬಗ್ಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ದೌರ್ಜನ್ಯಗಳ ವಿರುದ್ಧ ರಾಷ್ಟ್ರೀಯ ಸಹಾಯವಾಣಿ (National Helpline Against Atrocities (NHAA) ಪ್ರಾರಂಭ ಮಾಡಲಾಗುವುದು. ಇದು ದೇಶಾದ್ಯಂತ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಮತ್ತು 14566 ಇದರ ನಂಬರ್ ಎಂದು ತಿಳಿಸಿದೆ. ಯಾವುದೇ ಟೆಲಿಕಾಂ ಆಪರೇಟರ್ಗಳ ಮೊಬೈಲ್ ಅಥವಾ ಲ್ಯಾಂಡ್ಲೈನ್ ನಂಬರ್ನಿಂದ ಇದಕ್ಕೆ ಧ್ವನಿ ಕರೆ ಮಾಡಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ.
ದೇಶದ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹಾಯವಾಣಿ ಲಭ್ಯವಿರಲಿದ್ದು, ಹಿಂದಿ, ಇಂಗ್ಲಿಷ್ ಮತ್ತು ಆಯಾ ಭಾಗದ ಪ್ರಾದೇಶಿಕ ಭಾಷೆಯಲ್ಲಿ ಸೇವೆ ಲಭ್ಯವಿರಲಿದೆ. ಇನ್ನು ಈ ಸಹಾಯವಾಣಿ (NHAA)ಯ ಮೊಬೈಲ್ ಆ್ಯಪ್ ಕೂಡ ಬಳಕೆಗೆ ಬರಲಿದೆ ಎಂದೂ ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಹಾಗೇ, ದೇಶಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ನಿಬಂಧನೆ ಬಗ್ಗೆ ತಿಳಿಸುವುದು, ತಾರತಮ್ಯವನ್ನು ಕೊನೆಗಾಣಿಸಿ, ಎಲ್ಲರಿಗೂ ರಕ್ಷಣೆ ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.
ದೌರ್ಜನ್ಯದ ವಿರುದ್ಧ ನೀಡಲಾದ ಪ್ರತಿ ದೂರಿಗೂ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸಲಾಗಿದೆ, ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ, ನೀಡಲಾದ ದೂರುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ಆರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಮತ್ತು ಈ ಎಲ್ಲವೂ ಕಾಯ್ದೆ ನೀಡಿದ ಸಮಯ ಮಿತಿಯೊಳಗೇ ಆಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಸಹಾಯವಾಣಿ ತಂದಿದ್ದಾಗಿ ಹೇಳಿದೆ. ಅಂದಹಾಗೇ ದೇಶಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಗೆ 2018ರಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಅಂಥ ವರ್ಗದ ವ್ಯಕ್ತಿಗಳ ವಿರುದ್ಧ ಯಾರಾದರೂ ಜಾತಿ ನಿಂದನೆ ಮಾಡಿದರೆ ಪ್ರಾಥಮಿಕ ತನಿಖೆ ನಡೆಸದೆಯೂ ಅವರನ್ನು ಬಂಧಿಸಬಹುದಾಗಿದೆ.
ಇದನ್ನೂ ಓದಿ: ಚಂದನ್ ಶೆಟ್ಟಿ ಜತೆ ರಚಿತಾ ರಾಮ್ ‘ಲಕ ಲಕ ಲ್ಯಾಂಬೋರ್ಗಿನಿ’; ಪೋಸ್ಟರ್ ಮೂಲಕ ಹೆಚ್ಚಿತು ಕ್ರೇಜ್