Lok Sabha Election Dates: ಲೋಕಸಭೆ ಚುನಾವಣೆ ದಿನಾಂಕ ಮುಂದಿನ ಗುರುವಾರ ಪ್ರಕಟ ಸಾಧ್ಯತೆ
ಲೋಕಸಭೆ ಚುನಾವಣೆ ಕಾವು ನಿಧಾನಕೆ ಎಲ್ಲ ರಾಜ್ಯಗಳಲ್ಲಿ ಹೆಚ್ಚಾಗತೊಡಗಿದ್ದು ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿವೆ. ಈ ಮಧ್ಯೆ ಭಾರತೀಯ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಮುಂದಿನ ಗುರುವಾರ ಅಥವಾ ಶುಕ್ರವಾರ ಲೋಕಸಭೆ ಚುನಾವಣೆ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನವದೆಹಲಿ, ಮಾರ್ಚ್ 9: ಭಾರತೀಯ ಚುನಾವಣಾ ಆಯೋಗವು (Election Commission of India) ಸೋಮವಾರದಿಂದ ಬುಧವಾರದವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಭೇಟಿ ನೀಡಲಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಯಾವಾಗ ಚುನಾವಣೆ ನಡೆಸಬಹುದು ಎಂಬುದನ್ನು ನಿರ್ಣಯಿಸಲಿದೆ. ಅದರ ಬೆನ್ನಲ್ಲೇ, ಲೋಕಸಭೆ ಚುನಾವಣೆಯ (Lok Sabha Elections) ದಿನಾಂಕಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಅಥವಾ ಶುಕ್ರವಾರ ಚುನಾವಣಾ ದಿನಾಂಕ ಪ್ರಕಟವಾಗಬಹುದು ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸೆಪ್ಟೆಂಬರ್‌ನೊಳಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ ಆಯೋಗ ಅಲ್ಲಿಗೆ ಭೇಟಿ ನೀಡುತ್ತಿದೆ. ಈ ಮಧ್ಯೆ, ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯನ್ನು ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆಸಬಹುದೇ ಎಂದು ನಿರ್ಣಯಿಸಲು ಕೇಂದ್ರವು ಸಮಿತಿಯನ್ನು ಕೇಳಿತ್ತು.
ಅಂತಿಮ ಹಂತದ ಪರಿಶೀಲನೆಗಳನ್ನು ಪೂರ್ಣಗೊಳಿಸಿಕೊಂಡು, ಜಮ್ಮು ಕಾಶ್ಮೀರ ಭೇಟಿ ಮುಕ್ತಾಯಗೊಂಡ ನಂತರ ಚುನಾವಣಾ ಆಯೋಗವು ಗುರುವಾರ ಅಥವಾ ಶುಕ್ರವಾರ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಬಹುದು ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.
ಚುನಾವಣೆ ಘೋಷಣೆಯಾದ ತಕ್ಷಣ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆಗಳನ್ನು ನೀಡುತ್ತಿದ್ದು, ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಚುನಾವಣೆಗೆ ಸಂಬಂಧಿಸಿದಂತೆ, ಭದ್ರತಾ ವ್ಯವಸ್ಥೆ ಬಗ್ಗೆ ಆಯೋಗಕ್ಕೆ ಈಗಾಗಲೇ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಸೇರಿದಂತೆ ಇಡೀ ಸಮಿತಿಯು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಅಸೆಂಬ್ಲಿ ಚುನಾವಣೆಗಳು 2014 ರಲ್ಲಿ ನಡೆದಿದ್ದವು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಟಿಡಿಪಿ, ಜೆಎಸ್‌ಪಿ ಜೊತೆ ಬಿಜೆಪಿ ಸೀಟು ಹಂಚಿಕೆಗೆ ಒಪ್ಪಂದ
ಮತ್ತೊಂದೆಡೆ, ಚುನಾವಣೆ ಕಾವು ಜೋರಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಮೈತ್ರಿ ಒಪ್ಪಂದ, ಸೀಟು ಹಂಚಿಕೆ ಇತ್ಯಾದಿ ಪ್ರಕ್ರಿಯೆಗಳೂ ವೇಗ ಪಡೆದುಕೊಂಡಿವೆ. ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಪಕ್ಷದೊಂದಿಗೆ ಬಿಜೆಪಿ ಸೀಟು ಹಂಚಿಕೆಗೆ ಒಪ್ಪಂದ ಮಾಡಿಕೊಂಡಿವೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹಾಗೂ ಅವರ ಪಕ್ಷದ ಜತೆ ನಟ ಕಮಲ್ ಹಾಸನ್ ಮೈತ್ರಿ ಮಾಡಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Sat, 9 March 24