ಲೋಕಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಟಿಡಿಪಿ, ಜೆಎಸ್‌ಪಿ ಜೊತೆ ಬಿಜೆಪಿ ಸೀಟು ಹಂಚಿಕೆಗೆ ಒಪ್ಪಂದ
ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಪಕ್ಷದೊಂದಿಗೆ ಬಿಜೆಪಿ ಸೀಟು ಹಂಚಿಕೆಗೆ ಮುಂದಾಗಿದೆ. ಟಿಡಿಪಿ, ಜೆಎಸ್‌ಪಿ ನಾಯಕರಾದ ಚಂದ್ರಬಾಬು ನಾಯ್ಡು ಮತ್ತು ನಟ ಪವನ್ ಕಲ್ಯಾಣ್ ಅವರು ದಕ್ಷಿಣದ ಪ್ರಮುಖ ರಾಜ್ಯದಲ್ಲಿ ಸೀಟು ಹೊಂದಾಣಿಕೆಯನ್ನು ಅಂತಿಮಗೊಳಿಸಲು ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿದ್ದಾರೆ.
ದೆಹಲಿ, ಮಾರ್ಚ್ 09: ಲೋಕಸಭಾ ಚುನಾವಣೆಗೆ (Lok Sabha Elections) ಯಾವುದೇ ಸಮಯದಲ್ಲಿ ದಿನಾಂಕ ಘೋಷಣೆಯಾಗಬಹುದು. ಹೀಗಾಗಿ ಎಲ್ಲಾ ಪಕ್ಷಗಳು ಸಾಕಷ್ಟು ಕಸರತ್ತು ಮಾಡುತ್ತಿವೆ. ಇದರ ಮಧ್ಯೆ ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಪಕ್ಷದೊಂದಿಗೆ ಬಿಜೆಪಿ ಸೀಟು ಹಂಚಿಕೆಗೆ ಮುಂದಾಗಿದೆ. ಟಿಡಿಪಿ, ಜೆಎಸ್‌ಪಿ ನಾಯಕರಾದ ಚಂದ್ರಬಾಬು ನಾಯ್ಡು ಮತ್ತು ನಟ ಪವನ್ ಕಲ್ಯಾಣ್ ಅವರು ದಕ್ಷಿಣದ ಪ್ರಮುಖ ರಾಜ್ಯದಲ್ಲಿ ಸೀಟು ಹೊಂದಾಣಿಕೆಯನ್ನು ಅಂತಿಮಗೊಳಿಸಲು ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿದ್ದಾರೆ.
ಟಿವಿ9 ತೆಲುಗು ಪ್ರಕಾರ, ಟಿಡಿಪಿ 6 ಎಂಪಿ ಸ್ಥಾನಗಳನ್ನು ಬಿಜೆಪಿಗೆ ಹಂಚಿಕೆ ಮಾಡಲು ಒಪ್ಪಿಕೊಂಡಿದೆ. ಆದರೆ ವಿಧಾನಸಭೆ ಸ್ಥಾನಗಳ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗಿನ ಚರ್ಚೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ವಿಚಾರವನ್ನು ರಾಜ್ಯ ಮಟ್ಟದಲ್ಲಿ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥರೊಂದಿಗೆ ಚರ್ಚಿಸಲು ಅಮಿತ್ ಶಾ ಅವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Lok Sabha Elections 2024: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಜತೆ ಮೈತ್ರಿ ಮಾಡಿಕೊಂಡ ನಟ ಕಮಲ್ ಹಾಸನ್
ಟಿಡಿಪಿ, ಜೆಎಸ್‌ಪಿ, ಬಿಜೆಪಿ ಸೀಟು ಹಂಚಿಕೆ ವಿಚಾರ ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬಿಳಲಿದೆ. ಮಾತುಕತೆ ಯಶಸ್ವಿಯಾಗಿದ್ದು, ಮಾರ್ಚ್ 14 ರಂದು ನಡೆಯಲಿರುವ ಎನ್‌ಡಿಎ ಸಭೆಗೆ ಟಿಡಿಪಿ ಪಕ್ಷವನ್ನು ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಂದ್ರಬಾಬು ನಾಯ್ಡು ಅವರ ಪಕ್ಷವು ಮೈತ್ರಿಯ ಭಾಗವಾಗಿ ಜನಸೇನೆಗೆ ಲೋಕಸಭೆಯಲ್ಲಿ 3 ಮತ್ತು ವಿಧಾನಸಭೆಯಲ್ಲಿ 24 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಟಿಡಿಪಿ ಕೂಡ 94 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಒಟ್ಟು 175 ಸ್ಥಾನಗಳಲ್ಲಿ 145 ವಿಧಾನಸಭಾ ಸ್ಥಾನಗಳು ಮತ್ತು 25 ಸ್ಥಾನಗಳಲ್ಲಿ 17 ಎಂಪಿ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ರಾಜ್ಯಸಭೆಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ
ಬಿಜೆಪಿ, ಜೆಎಸ್‌ಪಿ 30 ವಿಧಾನಸಭೆ ಮತ್ತು 8 ಎಂಪಿ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಜೆಎಸ್‌ಪಿ ಮುಖ್ಯಸ್ಥ ಪವನ್ ಕಲ್ಯಾಣ್ ಕಾಕಿನಾಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಪವನ್ ಕಲ್ಯಾಣ್ರನ್ನು ತೆಲುಗು ಚಿತ್ರರಂಗದಲ್ಲಿ ‘ಪವರ್ ಸ್ಟಾರ್’ ಎಂದು ಕರೆಯುತ್ತಾರೆ. ಮೆಗಾ ಸ್ಟಾರ್ ಮತ್ತು ಮಾಜಿ ಕಾಂಗ್ರೆಸ್ ಸಚಿವ ಚಿರಂಜೀವಿ ಅವರ ಸಹೋದರರಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:46 pm, Sat, 9 March 24