ದೆಹಲಿ ಫೆಬ್ರವರಿ 24: ದೇಶದಲ್ಲಿ ಈವರೆಗೆ ಇದ್ದ ಹಳೇ ವಸಾಹತುಶಾಹಿ ಯುಗದ ಶಾಸನಗಳನ್ನು ಬದಲಿಸುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು (Criminal laws) ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಸರ್ಕಾರ ಶನಿವಾರ ಘೋಷಿಸಿದೆ. ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023(Bharatiya Nyaya Sanhita), ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, 2023, ಮತ್ತು ಭಾರತೀಯ ಸಾಕ್ಷ್ಯ (ಎರಡನೇ) ಮಸೂದೆ, 2023ಯು 1860 ರ ಭಾರತೀಯ ದಂಡ ಸಂಹಿತೆ, 1973 ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಮತ್ತು 1872 ರ ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಿಸಲಿದೆ. ಈ ಕಾನೂನುಗಳು ಸಂಸತ್ತಿನಿಂದ ಅನುಮೋದನೆಯನ್ನು ಪಡೆದಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಕಳೆದ ಡಿಸೆಂಬರ್‌ನಲ್ಲಿ ಇದಕ್ಕೆ ಒಪ್ಪಿಗೆ ನೀಡಿದ್ದರು.
ಕಳೆದ ವರ್ಷ ಸಂಸತ್ತಿನಲ್ಲಿ ಪರಿಚಯಿಸಲಾದ ಹೊಸ ಶಾಸನಗಳು ಭಾರತೀಯತೆ, ಭಾರತೀಯ ಸಂವಿಧಾನದ ಅನುಸರಣೆ ಮತ್ತು ಜನತೆಯ ಕಲ್ಯಾಣಕ್ಕೆ ಆದ್ಯತೆ ನೀಡುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಕಾನೂನುಗಳ ಅನುಷ್ಠಾನದೊಂದಿಗೆ, ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಐದು ವರ್ಷಗಳಲ್ಲಿ ವಿಶ್ವದ ಅತ್ಯಾಧುನಿಕವಾಗಿ ವಿಕಸನಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡಿಸೆಂಬರ್ 2023 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕ್ರಿಮಿನಲ್ ನ್ಯಾಯ ಮಸೂದೆಗಳ ಅನುಮೋದನೆಯನ್ನು ಭಾರತದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದರು.ಇದು ಹಳತಾದ ವಸಾಹತುಶಾಹಿ ಯುಗದ ಕಾಯಿದೆಗಳನ್ನು ಬದಲಿಸಿ ಸಾರ್ವಜನಿಕ ಸೇವೆ ಮತ್ತು ಕಲ್ಯಾಣದ ಮೇಲೆ ಕೇಂದ್ರೀಕರಿಸಿದ ಕಾನೂನುಗಳಿಂದ ನಿರೂಪಿಸಲ್ಪಟ್ಟ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ ಎಂದಿದ್ದರು ಮೋದಿ.
ಭಾರತೀಯ ನ್ಯಾಯ ಸಂಹಿತಾ, 2023, ಭಾರತೀಯ ದಂಡ ಸಂಹಿತೆ, 1860 ಅನ್ನು ಬದಲಿಸುತ್ತದೆ. ಇದರಲ್ಲಿ ದೇಶದ್ರೋಹವನ್ನು ತೆಗೆದುಹಾಕಲಾಗಿದೆ, ಆದರೆ ಹೊಸ ನಿಬಂಧನೆಯು ಪ್ರತ್ಯೇಕತಾವಾದಕ್ಕೆ ಮತ್ತು ಭಾರತದ ಸಾರ್ವಭೌಮತ್ವಕ್ಕೆ ವಿರುದ್ಧವಾಗಿರುವುದಕ್ಕೆ ಶಿಕ್ಷೆ ನೀಡುತ್ತದೆ. ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರ ಮತ್ತು ಗುಂಪು ಹತ್ಯೆಗೆ ಮರಣದಂಡನೆ ನೀಡಲಾಗುವುದು. ಜೊತೆಗೆ ಸಮುದಾಯ ಸೇವೆಯನ್ನು ಶಿಕ್ಷೆಯಾಗಿ ನೀಡಲಾಗುತ್ತದೆ.
ಇದನ್ನೂ ಓದಿ: ಫೆ.27ರಂದು ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಮೋದಿ ಮೆಗಾ ರ‍್ಯಾಲಿ; ಇಲ್ಲಿದೆ ಎರಡು ದಿನಗಳ ಭೇಟಿಯ ವೇಳಾಪಟ್ಟಿ
ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ, 2023, CrPC, 1973 ಅನ್ನು ಬದಲಿಸುತ್ತದೆ, ಇದು 30 ದಿನಗಳಲ್ಲಿ ತನಿಖೆ ಮತ್ತು ವಿಚಾರಣೆಯನ್ನು ಖಚಿತಪಡಿಸುತ್ತದೆ. ಸಂತ್ರಸ್ತರ ಹೇಳಿಕೆಗಳ ವಿಡಿಯೋ ರೆಕಾರ್ಡಿಂಗ್ ಕಡ್ಡಾಯವಾಗಿದೆ. ಭಾರತೀಯ ಸಾಕ್ಷ್ಯ, 2023ವು ಭಾರತೀಯ ಸಾಕ್ಷ್ಯ ಕಾಯಿದೆ, 1872 ಅನ್ನು ಬದಲಿಸುತ್ತದೆ. ಇದು ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಒಪ್ಪಿಕೊಳ್ಳುತ್ತದೆ ಮತ್ತು ಎಲ್ಲಾ ದಾಖಲೆಗಳ ಡಿಜಿಟಲೀಕರಣದ ಅಗತ್ಯವಿರುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Sat, 24 February 24