ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರಗಾಮಿಗಳನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಪುಲ್ವಾಮಾದ ದ್ರಾಬ್ಗಮ್ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಸುದೀರ್ಘ ಕಾರ್ಯಾಚರಣೆ (Encounter) ನಡೆಸಿದರು. ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು.
ಎಲ್ಲ ಮೂವರು ಉಗ್ರರೂ ಸ್ಥಳೀಯರೇ ಆಗಿದ್ದು, ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತಯ್ಯಬಾ ಜೊತೆಗೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಉಗ್ರನ ಪೈಕಿ ಒಬ್ಬನ ಹೆಸರು ಜುನೈದ್ ಶೀರ್ಗೊರ್ಜಿ. ಈತ ಜಮ್ಮು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ ರಿಯಾಜ್ ಅಹ್ಮದ್ ಥೋಕರ್ ಅವರ ಹತ್ಯೆಯ ಆರೋಪ ಹೊತ್ತಿದ್ದ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾದಲ್ಲಿ ಕಳೆದ ತಿಂಗಳು ಪೊಲೀಸ್ ಅಧಿಕಾರಿ ತಮ್ಮ ಮನೆಯಲ್ಲಿದ್ದಾಗಲೇ ಉಗ್ರರ ಮೇಲೆ ಗುಂಡು ಹಾರಿಸಿದ್ದರು. ಥೋಕರ್ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದರು.
ಇನ್ನಿಬ್ಬರು ಉಗ್ರಗಾಮಿಗಳನ್ನು ಫಾಜಿಲ್ ನಾಝಿರ್ ಭಟ್ ಮತ್ತು ಇರ್ಫಾನ್ ಅಹ್ ಮಾಲಿಕ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪುಲ್ವಾಮಾ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಭಯೋತ್ಪಾದನೆಗೆ ಬಳಸುವ ಪ್ರಚಾರ ಸಾಹಿತ್ಯ, ಎರಡು ಎಕೆ 47 ರೈಫಲ್ಸ್, ಪಿಸ್ತೂಲ್ ಸೇರಿದಂತೆ ಸಾಕಷ್ಟು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ಹಿಂದೂಗಳು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಕೊಲ್ಲುವ ಪ್ರಕರಣಗಳ ಹೆಚ್ಚಾದ ಹಿನ್ನೆಲೆಯಲ್ಲಿ ಈ ಎನ್ಕೌಂಟರ್ಗೆ ಮಹತ್ವ ಬಂದಿದೆ. ಉಗ್ರಗಾಮಿಗಳ ಉಪಟಳದಿಂದ ಕಂಗಾಲಾಗಿರುವ ಕಾಶ್ಮೀರಿ ಪಂಡಿತರು ಕಣಿವೆ ತೊರೆಯಲು ಮುಂದಾಗಿದ್ದಾರೆ. ಅವರಲ್ಲಿ ವಿಶ್ವಾಸ ತುಂಬಲು ಸರ್ಕಾರ ಪ್ರಯತ್ನಿಸುತ್ತಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 am, Sun, 12 June 22