ಮಮತಾ ಬ್ಯಾನರ್ಜಿ ಹಟಕ್ಕೆ ಕೇಂದ್ರದ ತಿರುಗೇಟು; ಮೂವರು ಐಪಿಎಸ್ ಅಧಿಕಾರಿಗಳಿಗೆ ಹುದ್ದೆ ನಿಗದಿ
ಕೇಂದ್ರ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಐಪಿಎಸ್ ಅಧಿಕಾರಿಗಳ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇದೆ. ಐಪಿಎಸ್ ಕೇಡರ್ ನಿಯಮದ ಅನ್ವಯ, ಯಾವುದೇ ವಿವಾದ ಉಂಟಾದ ಸಂದರ್ಭದಲ್ಲಿ ಕೇಂದ್ರದ ನಿರ್ಧಾರವೇ ಊರ್ಜಿತದಲ್ಲಿರುತ್ತದೆ ಎಂದು ಹೇಳಿದೆ.
ದೆಹಲಿ: ಕೇಂದ್ರ ಸೇವೆಗೆ ವಾಪಸ್ ಬರುವಂತೆ ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆ ಮೂವರು ಅಧಿಕಾರಿಗಳನ್ನು ಆದಷ್ಟು ಶೀಘ್ರವೇ ಕರ್ತವ್ಯದಿಂದ ಮುಕ್ತಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದೆ.
ಈ ಮಧ್ಯೆ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ. ಮೂವರು ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ್ದು ಅಸಾಂವಿಧಾನಿಕ ಕ್ರಮ. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ವಿಸ್ತರಣಾವಾದ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯ ಎದುರು ನಮ್ಮ ಸರ್ಕಾರ ಮಂಡಿಯೂರುವುದಿಲ್ಲ. ನಮ್ಮ ರಾಜ್ಯದ ನ್ಯಾಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಹಾಗೂ ಇಲ್ಲಿನ ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸಲು ಮಾಡುತ್ತಿರುವ ಪ್ರಯತ್ನವಿದು ಎಂದು ಕಿಡಿಕಾರಿದ್ದಾರೆ. ಈ ಮೂವರು ಅಧಿಕಾರಿಗಳನ್ನು ಕಳಿಸುವುದಿಲ್ಲ ಎಂದೂ ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ.
ಆದರೆ ಕೇಂದ್ರ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಐಪಿಎಸ್ ಅಧಿಕಾರಿಗಳ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇದೆ. ಐಪಿಎಸ್ ಕೇಡರ್ ನಿಯಮದ ಅನ್ವಯ, ಯಾವುದೇ ವಿವಾದ ಉಂಟಾದ ಸಂದರ್ಭದಲ್ಲಿ ಕೇಂದ್ರದ ನಿರ್ಧಾರವೇ ಊರ್ಜಿತದಲ್ಲಿರುತ್ತದೆ. ಅದರಂತೆ ನಮ್ಮ ತೀರ್ಮಾನವೇ ಅಂತಿಮವಾಗಿರುತ್ತದೆ. ಹಾಗಾಗಿ ಅವರನ್ನು ವಾಪಸ್ ಕಳಿಸದೆ ನಿಮಗೆ ಬೇರೆ ದಾರಿ ಇಲ್ಲ ಎಂದು ಸಿಎಂಗೆ ತಿರುಗೇಟು ನೀಡಿದೆ.
ಯಾವ ಅಧಿಕಾರಿಗೆ ಏನು ಅಧಿಕಾರ? ಪಶ್ಚಿಮ ಬಂಗಾಳದ ಡೈಮಂಡ್ ಹರ್ಬಾರ್ ಎಸ್ಪಿಯಾಗಿದ್ದ ಭೋಲಾನಾಥ್ ಪಾಂಡೆ, ದಕ್ಷಿಣ ಬಂಗಾಳದ ADG (Additional director general of police) ಆಗಿದ್ದ ರಾಜೀವ್ ಮಿಶ್ರಾ ಮತ್ತು ಪ್ರೆಸಿಡೆನ್ಸಿ ರೇಂಜ್ನ DIG (Deputy inspector general of police) ಆಗಿದ್ದ ಪ್ರವೀಣ್ ತ್ರಿಪಾಠಿಯವರನ್ನು ಕೇಂದ್ರ ಸೇವೆಗೆ ವಾಪಸ್ ಆಗುವಂತೆ ತಿಳಿಸಿದೆ.
ಅವರಲ್ಲಿ ಭೋಲಾನಾಥ್ಗೆ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲೆಪ್ಮೆಂಟ್ ಬ್ಯೂರೋದ SP, ಪ್ರವೀಣ್ ತ್ರಿಪಾಠಿಗೆ ಸಶಸ್ತ್ರ ಸೀಮಾ ಬಲ್ದ DIG ಮತ್ತು ರಾಜೀವ್ ಮಿಶ್ರಾರಿಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ದಳದ IG ಹುದ್ದೆಯನ್ನು ಈಗಾಗಲೇ ನೀಡಿದೆ. ಆದರೆ ಅಧಿಕಾರಿಗಳನ್ನು ಪಶ್ಚಿಮಬಂಗಾಳ ಸರ್ಕಾರವಿನ್ನೂ ನಿಯಮಾನುಸಾರ ಹುದ್ದೆಯಿಂದ ಬಿಡುಗಡೆ ಮಾಡಿಲ್ಲ. ಅದರ ಬದಲು ಸಿಎಂ ಕೇಂದ್ರದ ನಡೆಯನ್ನೇ ತೀವ್ರವಾಗಿ ವಿರೋಧಿಸುತ್ತಿದ್ದಾರೆ.
We wouldn’t allow this brazen attempt by the Centre to control the State machinery by proxy! West Bengal is not going to cow-down in front of expansionist & undemocratic forces. (3/3)
— Mamata Banerjee (@MamataOfficial) December 17, 2020
ಕರ್ತವ್ಯ ಲೋಪ ಆರೋಪ: ಮೂವರು ಅಧಿಕಾರಿಗಳನ್ನು ಕೇಂದ್ರ ಸೇವೆಗೆ ವರ್ಗಾವಣೆ ಮಾಡಿದ ಗೃಹ ಇಲಾಖೆ
ಬಿಜೆಪಿ ಹಣದ ಬ್ಯಾಗ್ ನೀಡಿ ನಮ್ಮ ನಾಯಕರನ್ನು ಸೆಳೆಯೋ ಪ್ರಯತ್ನ ಮಾಡುತ್ತಿದೆ: ಮಮತಾ ಬ್ಯಾನರ್ಜಿ ಆರೋಪ
Published On - 6:38 pm, Thu, 17 December 20