ರಾಮ ಮಂದಿರದ ಸಮಾರಂಭದಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಕಾಪಾಡಿದ ವಾಯುಪಡೆ

|

Updated on: Jan 22, 2024 | 5:58 PM

ರಾಮಮಂದಿರ ಉದ್ಘಾಟನಾ ಸಮಾರಂಭ ವೇಳೆ ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಕ್ಷಿಪ್ರ ಕಾರ್ಯಾಚರಣೆ ತಂಡವು ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿತು. ರೋಗಿಯ ಆರೋಗ್ಯ ಸ್ಥಿತಿಯು ಸ್ಥಿರವಾದ ನಂತರ, ಹೆಚ್ಚಿನ ವೀಕ್ಷಣೆ ಮತ್ತು ವಿಶೇಷ ಆರೈಕೆಗಾಗಿ ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಮ ಮಂದಿರದ ಸಮಾರಂಭದಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಕಾಪಾಡಿದ ವಾಯುಪಡೆ
ಪ್ರಾತಿನಿಧಿಕ ಚಿತ್ರ
Follow us on

ಅಯೋಧ್ಯೆ ಜನವರಿ 22: ರಾಮಮಂದಿರದಲ್ಲಿ (Ram mandir) ಸೋಮವಾರ ನಡೆದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವೇಳೆ ಹೃದಯಾಘಾತಕ್ಕೊಳಗಾದ (Heart Attack) ಭಕ್ತನನ್ನು ಭಾರತೀಯ ವಾಯುಪಡೆಯ (IAF) ಕ್ಷಿಪ್ರ ಕಾರ್ಯಾಚರಣೆ ತಂಡದ ಸಂಚಾರಿ ಆಸ್ಪತ್ರೆಯು ಸಮಯೋಚಿತ ವೈದ್ಯಕೀಯ ಚಿಕಿತ್ಸೆ ನೀಡಿ ಕಾಪಾಡಿದೆ. ದೇವಾಲಯದ ಸಂಕೀರ್ಣದೊಳಗೆ ರಾಮಕೃಷ್ಣ ಶ್ರೀವಾಸ್ತವ (65) ಎಂಬವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣವೇ ವಿಂಗ್ ಕಮಾಂಡರ್ ಮನೀಶ್ ಗುಪ್ತಾ ನೇತೃತ್ವದ BHISHM ಕ್ಯೂಬ್ ತಂಡವು ಅವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿತು.

ನಿರ್ಣಾಯಕ ಗೋಲ್ಡನ್ ಅವರ್ ನಲ್ಲಿ ವಾಯುಪಡೆ ನೀಡಿದ ಚಿಕಿತ್ಸೆಯಿಂದಾಗಿ ಪ್ರಾಣ ಉಳಿದಿದೆ. ಆರಂಭಿಕ ಮೌಲ್ಯಮಾಪನದ ನಂತರ, ಶ್ರೀವಾಸ್ತವ ಅವರ ರಕ್ತದೊತ್ತಡದ ಮಟ್ಟವು 210/170 mm Hg ಅಪಾಯಕಾರಿ ಮಟ್ಟಕ್ಕೆ ಏರಿದೆ ಎಂದು ಕಂಡುಬಂದಿದೆ.

ಕ್ಷಿಪ್ರ ಕಾರ್ಯಾಚರಣೆ ತಂಡವು ಅವರಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿತು. ರೋಗಿಯ ಸ್ಥಿತಿಯು ಸ್ಥಿರವಾದ ನಂತರ, ಹೆಚ್ಚಿನ ವೀಕ್ಷಣೆ ಮತ್ತು ವಿಶೇಷ ಆರೈಕೆಗಾಗಿ ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆರೋಗ್ಯ ಮೈತ್ರಿ ವಿಪತ್ತು ನಿರ್ವಹಣಾ ಯೋಜನೆಯಡಿ ಎರಡು ಕ್ಯೂಬ್-ಭೀಷ್ಮ್ ಮೊಬೈಲ್ ಆಸ್ಪತ್ರೆಗಳನ್ನು ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ವೈದ್ಯಕೀಯ ಸಿದ್ಧತೆ ಮತ್ತು ಪ್ರತಿಕ್ರಿಯೆ ಸಾಮರ್ಥ್ಯವನ್ನು ಹೆಚ್ಚಿಸಲು ನಿಯೋಜಿಸಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣೆ ತಿಳಿಸಿತ್ತು.

ಇದನ್ನೂ ಓದಿ:Ram Donation: ರಾಮಮಂದಿರಕ್ಕೆ ದೇಣಿಗೆ ನೀಡುವ ಹಣಕ್ಕೆ ಇದೆ ತೆರಿಗೆ ವಿನಾಯಿತಿ; ಸ್ವಾಮಿ ಕಾರ್ಯ, ಸ್ವಕಾರ್ಯ ಎಂದರೆ ಇದಾ? ಡೊನೇಟ್ ಮಾಡುವುದು ಹೇಗೆ? 

ಈ ಮೊಬೈಲ್ ಆಸ್ಪತ್ರೆಗಳು ತುರ್ತು ಸಂದರ್ಭಗಳಲ್ಲಿ ವಿಪತ್ತು ಪ್ರತಿಕ್ರಿಯೆ ಮತ್ತು ವೈದ್ಯಕೀಯ ಬೆಂಬಲವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಹಲವಾರು ನವೀನ ಸಾಧನಗಳೊಂದಿಗೆ ಸಜ್ಜುಗೊಂಡಿವೆ ಎಂದು ಪ್ರಕಟಣೆ ಹೇಳಿದೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠೆ

ಇಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಕಾರ್ಯ ನೆರವೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ರಾಮಲಲ್ಲಾ ಪ್ರಾಣಪ್ರತಿಷ್ಠೆ ನಂತರ ಒಂದು ದಿನದ ನಂತರ ದೇಗುಲವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ.

“ಪ್ರಾಣ ಪ್ರತಿಷ್ಠಾ” ಸಮಾರಂಭವು 12.20 ಕ್ಕೆ ಪ್ರಾರಂಭವಾಯಿತು. ನಂತರ  ಮೋದಿ ಅವರು ಸ್ಥಳದಲ್ಲಿ ದರ್ಶಕರು ಮತ್ತು ಪ್ರಮುಖ ವ್ಯಕ್ತಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಿದರು. “ಇಂದು ನಮ್ಮ ರಾಮ ಬಂದಿದ್ದಾನೆ. ಯುಗಯುಗಗಳ ಸುದೀರ್ಘ ಕಾಯುವಿಕೆಯ ನಂತರ, ನಮ್ಮ ರಾಮ ಬಂದಿದ್ದಾನೆ” ಎಂದು ಹೇಳಿದ ಪ್ರಧಾನಿ ಮೋದಿ, “ನಮ್ಮ ರಾಮಲಲ್ಲಾ ಇನ್ನು ಮುಂದೆ ಟೆಂಟ್‌ನಲ್ಲಿ ಇರುವುದಿಲ್ಲ. ನಮ್ಮ ರಾಮ್ ಲಲ್ಲಾ ಭವ್ಯವಾದ ದೇವಾಲಯದಲ್ಲಿ ಇರುತ್ತಾನೆ ಎಂದಿದ್ದಾರೆ.

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ  2019 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ  ದೇವಾಲಯದ ನಿರ್ಮಾಣದ ಮೊದಲ ಹಂತದ ನಂತರ ಶಂಕುಸ್ಥಾಪನೆ ಸಮಾರಂಭವನ್ನು ನಡೆಸಲಾಯಿತು. ರಾಮನ ಜನ್ಮಸ್ಥಳವನ್ನು ಗುರುತಿಸುವ ದೇವಾಲಯದ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ದಾವೆದಾರರು ವಾದಿಸಿದರು. 1992 ರಲ್ಲಿ, 16 ನೇ ಶತಮಾನದ ಮಸೀದಿಯನ್ನು “ಕರ ಸೇವಕರು” ಕೆಡವಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ