ತಿರುಮಲದಲ್ಲಿ (Tirumala) ತಿಮ್ಮಪ್ಪನ ದರ್ಶನಕ್ಕಾಗಿ ಅಲಿಪಿರಿ ಮಾರ್ಗದಲ್ಲಿ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ಭಕ್ತರಿಗೆ ಗುರುವಾರ ಚಿರತೆಯೊಂದು (Cheetah) ಕಾಣಿಸಿಕೊಂಡಿತ್ತು. ಏಳನೇ ಮೈಲಿ ಬಳಿ ಚಿರತೆಯೊಂದು ಬಾಲಕನ ಮೇಲೆ ದಾಳಿ ಮಾಡಿ ಕಾಡಿನಲ್ಲಿ ವೇಗವಾಗಿ ಕಣ್ಮರೆಯಾಗಿದೆ. ತಕ್ಷಣ ಎಚ್ಚೆತ್ತ ಬಾಲಕನ ಅಜ್ಜ, ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಕೂಗುತ್ತಾ ಅಟ್ಟಿಸಿಕೊಂಡು ಹೋಗಿದ್ದಾರೆ. ಈ ವೇಳೆ ಆ ಮಾರ್ಗವಾಗಿ ಹೋಗುತ್ತಿದ್ದ ತಿರುಪತಿ ಎಸ್ಸೈ ಮಾಹಿತಿ ಪಡೆದು ಕೂಡಲೇ ಸ್ಥಳದಲ್ಲಿ ಶೋಧ ನಡೆಸಿ, ಭದ್ರತೆ ಕಲ್ಪಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸುಮಾರು 150 ಮೀಟರ್ ದೂರದಲ್ಲಿ ಚಿರತೆ ಬಾಲಕನನ್ನು ಬಿಟ್ಟು ಹೋಗಿದೆ.. ಚಿರತೆಯ ದಾಳಿಯಿಂದ ಬಾಲಕನ ತಲೆ ಹಾಗೂ ಹೃದಯಕ್ಕೆ ತೀವ್ರ ಪೆಟ್ಟಾಗಿದೆ. ಈ ವಿಷಯ ತಿಳಿದ ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ (ಟಿಟಿಡಿ ಇಒ Tirumala Tirupati Devasthanams EO) ಎ.ವಿ. ಧರ್ಮ ರೆಡ್ಡಿ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಇನ್ನು ಬಾಲಕನನ್ನು 108 ವಾಹನದಲ್ಲಿ ತಿರುಪತಿಯ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮತ್ತೊಂದೆಡೆ, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಟಿಟಿಡಿ ಆಡಳಿತ ಮಂಡಳಿ ವಿಚಾರಣೆ/ ಆಲೋಚನೆ ನಡೆಸುತ್ತಿದೆ. ಅಲಿಪಿರಿ ಮೆಟ್ಟಿಲುಗಳ ಮೇಲಿನ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಶ್ರೀವಾರಿ ಮೆಟ್ಟಿಲುಗಳ ಮೇಲಿಂದ ಪಾದಯಾತ್ರೆ ನಡೆಸುವುದನ್ನು ರಾತ್ರಿ 6 ಗಂಟೆಯ ನಂತರ ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಆದರೆ ಟಿಟಿಡಿ ಸಿವಿ ಎಸ್‌ಒ ನರಸಿಂಹ ಕಿಶೋರ್ ಅವರು ಈ ಕುರಿತು ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.
ಗಾಯಗೊಂಡ ಬಾಲಕ ಕೌಶಿಕ್ ನನ್ನು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಭೇಟಿ ನೀಡಿ, ಯೋಗಕ್ಷೇಮ ವಿಚಾರಿಸಿದ್ದಾರೆ. ಬಾಲಕನ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ತಿರುಪತಿಯ ಮಕ್ಕಳ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೌಶಿಕ್ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಚಿರತೆಯ ದಾಳಿಯಿಂದ ಬದುಕುಳಿದ ಬಾಲಕ ಕೌಶಿಕ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದಕ್ಕೆ ವೆಂಕಟೇಶ್ವರ ಸ್ವಾಮಿಯ ಕೃಪಾಕಟಾಕ್ಷವೇ ಕಾರಣ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ, ಟಿಟಿಡಿ ಪಾದಚಾರಿ ಮಾರ್ಗದಲ್ಲಿ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಅಲಿಪಿರಿ ಮೆಟ್ಟಿಲುಗಳ ಮೇಲೆ ನಡೆಯುವ ಭಕ್ತರಿಗೆ ಎಚ್ಚರಿಕೆ ನೀಡುತ್ತಾ ಬಂದಿದೆ. ಮೆಟ್ಟಿಲುಗಳ ಮೇಲೆ ನಡೆಯುವ ಭಕ್ತರು ಗುಂಪು ಗುಂಪಾಗಿ ಹೋಗುವಂತೆ ಜಾಗೃತ ಅಧಿಕಾರಿಗಳು ಭಕ್ತರಿಗೆ ಮನವಿ ಮಾಡುತ್ತಿದ್ದಾರೆ. ತಿರುಪತಿ ಜಿಲ್ಲಾ ಅರಣ್ಯಾಧಿಕಾರಿ ಸತೀಶ್ ಅವರು ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಚಿರತೆಗಳ ಚಲನವಲನದ ಬಗ್ಗೆ ಭಕ್ತರು ಜಾಗೃತರಾಗಿರಲು ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ