TMC Foundation Day: ತೃಣಮೂಲ ಕಾಂಗ್ರೆಸ್​ಗೆ 24 ವರ್ಷ; ರಾಷ್ಟ್ರ ರಾಜಕಾರಣದತ್ತ ದೀದಿ ಒಲವು, ಒಂದಾಗಲು ಕಾರ್ಯಕರ್ತರಿಗೆ ಕರೆ

| Updated By: Lakshmi Hegde

Updated on: Jan 01, 2022 | 4:40 PM

ಮಮತಾ ಬ್ಯಾನರ್ಜಿ 1998ರಲ್ಲಿ ಟಿಎಂಸಿ ಸೇರ್ಪಡೆಯಾಗುವುದಕ್ಕೂ ಮೊದಲು 26 ವರ್ಷ ಕಾಂಗ್ರೆಸ್ ಸದಸ್ಯೆಯಾಗಿದ್ದರು. ಹೀಗೆ ಪಕ್ಷ ಸಂಸ್ಥಾಪನೆಯಾಗಿ ಎರಡೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಿತು.

TMC Foundation Day: ತೃಣಮೂಲ ಕಾಂಗ್ರೆಸ್​ಗೆ 24 ವರ್ಷ; ರಾಷ್ಟ್ರ ರಾಜಕಾರಣದತ್ತ ದೀದಿ ಒಲವು, ಒಂದಾಗಲು ಕಾರ್ಯಕರ್ತರಿಗೆ ಕರೆ
ಮಮತಾ ಬ್ಯಾನರ್ಜಿ
Follow us on

ಇಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷ(All India Trinamool Congress)ದ ಸಂಸ್ಥಾಪನಾ ದಿನ(TMC Foundation Day). ತನ್ನಿಮಿತ್ತ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರಿಗೆ ಶುಭ ಕೋರಿದ್ದಾರೆ. ದೇಶದ ಫೆಡರಲ್​ ರಚನೆಯನ್ನು ಬಲಪಡಿಸಲು ಒಗ್ಗಟ್ಟಾಗುವಂತೆ ಕರೆ ನೀಡಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಮೊದಲು ಕಾಂಗ್ರೆಸ್​ ಪಕ್ಷದಲ್ಲಿಯೇ ಇದ್ದವರು. ನಂತರ 1998ರ ಜನವರಿ 1ರಂದು ತೃಣಮೂಲ ಕಾಂಗ್ರೆಸ್ ಎಂಬ ಪ್ರಾದೇಶಿಕ ಪಕ್ಷ ಹುಟ್ಟುಹಾಕಿದ್ದಾರೆ. ಆ ಪಕ್ಷ ಪ್ರಸ್ತುತ ಕಾಲಮಾನದಲ್ಲಿ ಕಾಂಗ್ರೆಸ್​ಗಿಂತಲೂ ಒಂದು ಹೆಜ್ಜೆ ಜಾಸ್ತಿಯೇ ಪ್ರಬಲ ಪಕ್ಷ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಾರೆ. 

ಇಂದು ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ಟಿಎಂಸಿ ಸಂಸ್ಥಾಪನಾ ದಿನವಾದ ಇಂದು ನಾನು ನನ್ನ ಮಾ-ಮಾತಿ-ಮನುಷ (ತಾಯಿ-ಭೂಮಿ-ಮನುಷ್ಯ) ಕುಟುಂಬದ ಎಲ್ಲ ಸದಸ್ಯರು, ಕಾರ್ಯಕರ್ತರು, ಬೆಂಬಲಿಗರಿಗೆ ಶುಭ ಹಾರೈಸುತ್ತೇನೆ. 1998ರಲ್ಲಿ ನಮ್ಮ ಪ್ರಯಾಣ ಶುರುವಾಯಿತು. ಅಂದಿನಿಂದಲೂ ಕೂಡ ಜನಸೇವೆಯೇ ನಮ್ಮ ಆದ್ಯತೆಯಾಗಿದೆ. ಹಾಗೇ, ಅವರ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇವೆ ಎಂದು ಹೇಳಿದ್ದಾರೆ.  ಹಾಗೇ, ಇನ್ನೊಂದು ಟ್ವೀಟ್ ಮಾಡಿ, ನಾವೀಗ ಇನ್ನೊಂದು ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ದೇಶದಲ್ಲಿ ನಡೆಯಲಿರುವ ಎಲ್ಲ ಅನ್ಯಾಯಗಳ ವಿರುದ್ಧವೂ ನಾವು ಒಗ್ಗಟ್ಟಾಗಿ ಹೋರಾಡೋಣ. ಪರಸ್ಪರ ಕರುಣೆ ಮತ್ತು ಗೌರವದಿಂದ ವ್ಯವಹರಿಸೋಣ. ನಿಮ್ಮೆಲ್ಲರ ಆಶೀರ್ವಾದಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದು ಬರೆದಿದ್ದಾರೆ.

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಹ್ಯಾಟ್ರಿಕ್ ಅವಧಿಗೆ ಮುಖ್ಯಮಂತ್ರಿಯಾದವರು. ಪಕ್ಕಾ ರೆಬಲ್​ ನಾಯಕಿ ಎನ್ನಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಕಟು ವಿರೋಧಿ ಪಕ್ಷವಾಗಿ ತೃಣಮೂಲ ಕಾಂಗ್ರೆಸ್​ ಬೆಳೆಯುತ್ತಿದೆ. ಮಮತಾ ಬ್ಯಾನರ್ಜಿ ಕೂಡ ತಮ್ಮ ಪಕ್ಷವನ್ನು, ಬಿಜೆಪಿಗೆ ಸೆಡ್ಡು ಕೊಡಬಲ್ಲ ಏಕೈಕ ಪಕ್ಷ ಎಂದೇ ಬಿಂಬಿಸುತ್ತಾರೆ. ಅದೂ ಸತ್ಯವೇ ಎಂಬಂತೆ, ಪಶ್ಚಿಮ ಬಂಗಾಳದಲ್ಲಿ ಈ ಬಾರಿಯೂ ಕೂಡ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆಯಲ್ಲೂ ಕೂಡ ಕಡಿಮೆ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುತ್ತದೆ. ಅದರ ಹೊರತಾಗಿ, ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಮಮತಾ ಬ್ಯಾನರ್ಜಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದಾರೆ ಎಂಬುದನ್ನು ಅವರ ಗೆಲುವೇ ಸೂಚಿಸುತ್ತದೆ.

ಸಂಸ್ಥಾಪನೆ ಹೇಗಾಯಿತು?
ಮಮತಾ ಬ್ಯಾನರ್ಜಿ 1998ರಲ್ಲಿ ಟಿಎಂಸಿ ಸೇರ್ಪಡೆಯಾಗುವುದಕ್ಕೂ ಮೊದಲು 26 ವರ್ಷ ಕಾಂಗ್ರೆಸ್ ಸದಸ್ಯೆಯಾಗಿದ್ದರು. ಹೀಗೆ ಪಕ್ಷ ಸಂಸ್ಥಾಪನೆಯಾಗಿ ಎರಡೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಿತು. ಅದರಲ್ಲಿ ಪಶ್ಚಿಮ ಬಂಗಾಳದಲ್ಲಿ 7 ಲೋಕಸಭೆ ಕ್ಷೇತ್ರಗಳನ್ನು ಟಿಎಂಸಿ ಗೆದ್ದುಕೊಂಡಿತು. ಆದರೆ 1998ರಲ್ಲಿ ರಚನೆಯಾದ ಸರ್ಕಾರಕ್ಕೆ (ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿ) ಬೆಂಬಲ ಸಿಗದೆ ಮತ್ತೆ 1999ರಲ್ಲಿ ಲೋಕಸಭಾ ಚುನಾವಣೆ ನಡೆಯಿತು. ಒಂದು ವರ್ಷದ ಅವಧಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಟಿಎಂಸಿ 8 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಹಾಗೇ 2000ನೇ ಇಸ್ವಿಯಲ್ಲಿ ನಡೆದ ಕೊಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆಯಲ್ಲೂ ಗೆದ್ದಿತು. ಇನ್ನೂ ಒಂದು ಕುತೂಹಲಕಾರಿ ಸಂಗತಿಯೆಂದರೆ, ದೀದಿ ಪಕ್ಷ, ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಗೆ ಬೆಂಬಲ ನೀಡಿ, ಎನ್​ಡಿಎ ಒಕ್ಕೂಟವನ್ನು ಸೇರಿತ್ತು.ನಂತರ 2006ರಲ್ಲಿ ಈ ಒಕ್ಕೂಟವನ್ನು ತೊರೆದಿದೆ.

ಆರಂಭದಿಂದಲೂ ಪ್ರಾದೇಶಿಕವಾಗಿ ಒಂದು ಹಂತದ ಯಶಸ್ಸನ್ನೇ ಕಾಣುತ್ತ ಬಂದಿರುವ ಮಮತಾ ಬ್ಯಾನರ್ಜಿ ಇದೀಗ ರಾಷ್ಟ್ರಮಟ್ಟದಲ್ಲಿ ಪಕ್ಷದ ವ್ಯಾಪ್ತಿ ಹೆಚ್ಚಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಒಟ್ಟಾಗಲು ಪ್ರತಿಪಕ್ಷಗಳಿಗೆ ಕರೆ ನೀಡುತ್ತಿದ್ದಾರೆ. ಬೇರೆ ರಾಜ್ಯಗಳ ಪ್ರವಾಸವನ್ನೂ ಮಾಡುತ್ತಿದ್ದಾರೆ. ತಾವು ಪ್ರಧಾನಿ ಅಭ್ಯರ್ಥಿಯೆಂದು ಎಲ್ಲಿಯೂ ಹೇಳಿಕೊಳ್ಳದೆ ಇದ್ದರೂ, ಸದ್ಯದ ಪ್ರಧಾನಿಯ ಆಡಳಿತ ವೈಖರಿಯನ್ನು ಟೀಕಿಸುವ ಜತೆ, ತಾನೂ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎಂಬುದನ್ನು ಆಗಾಗ ಪ್ರಸ್ತುತಪಡಿಸುತ್ತಲೇ ಇದ್ದಾರೆ.

ಇದನ್ನೂ ಓದಿ: ಪತ್ನಿಯ ಪ್ರೀತಿಯ ಗಿಫ್ಟ್​ ನೋಡಿ ಕಣ್ಣೀರು ಹಾಕಿದ ಪತಿ: ವೀಡಿಯೋ ವೈರಲ್​