ಬಂಗಾಳದಲ್ಲಿ ಟಿಎಂಸಿ ಹೋಗುತ್ತದೆ, ಬಿಜೆಪಿ ಬರುತ್ತದೆ; ಕೊಲ್ಕತ್ತಾದಲ್ಲಿ ದೀದಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 5,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮೆಟ್ರೋ ಮಾರ್ಗಗಳು ಮತ್ತು ನಗರ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮಮತಾ ಬ್ಯಾನರ್ಜಿಯ ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಮುಂದಿನ ಸರ್ಕಾರ ರಚಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಂಗಾಳದಲ್ಲಿ ಟಿಎಂಸಿ ಹೋಗುತ್ತದೆ, ಬಿಜೆಪಿ ಬರುತ್ತದೆ; ಕೊಲ್ಕತ್ತಾದಲ್ಲಿ ದೀದಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Pm Modi in kolkata

Updated on: Aug 22, 2025 | 7:35 PM

ಕೊಲ್ಕತ್ತಾ, ಆಗಸ್ಟ್ 22: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ (Modi in Kolkata) ಇಂದು ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳು ಜನರನ್ನು ತಲುಪಲು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಆಯ್ಕೆ ಮಾಡುವುದು ಅವಶ್ಯಕ. ಮುಂದಿನ ಬಾರಿ ಟಿಎಂಸಿಯನ್ನು ಅಧಿಕಾರದಿಂದ ತೆಗೆದುಹಾಕಿ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ” ಎಂದು ಮೋದಿ ಹೇಳಿದ್ದಾರೆ.

ಕೇಂದ್ರವು ರಾಜ್ಯ ಸರ್ಕಾರಕ್ಕೆ ಕಳುಹಿಸುವ ಹಣವನ್ನು ಟಿಎಂಸಿ ಸರ್ಕಾರ ಮಹಿಳೆಯರು ಮತ್ತು ಬಡವರ ಕಲ್ಯಾಣಕ್ಕಾಗಿ ಬಳಸುತ್ತಿಲ್ಲ. ಅದರ ಬದಲಾಗಿ ಆ ಹಣವನ್ನು ಟಿಎಂಸಿ ಕೇಡರ್‌ಗೆ ಖರ್ಚು ಮಾಡಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಿದೆ. ಆದರೆ ಬಂಗಾಳದ ಅಭಿವೃದ್ಧಿಯು ರಾಜ್ಯ ಸರ್ಕಾರದಿಂದ ಭಾರಿ ಸವಾಲುಗಳನ್ನು ಎದುರಿಸುತ್ತಿದೆ. ಏಕೆಂದರೆ ಕಲ್ಯಾಣ ಯೋಜನೆಗಳಿಗೆ ಬಿಡುಗಡೆಯಾದ ಹಣವನ್ನು ಟಿಎಂಸಿ ಲೂಟಿ ಮಾಡಿ ಪಕ್ಷದ ಕೇಡರ್‌ಗೆ ಖರ್ಚು ಮಾಡುತ್ತಿದೆ ಎಂದಿದ್ದಾರೆ.


ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಮಮತಾ ಬ್ಯಾನರ್ಜಿ ಗೈರು

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಅಪರಾಧ ಮತ್ತು ಭ್ರಷ್ಟಾಚಾರ ಟಿಎಂಸಿ ಸರ್ಕಾರದ ಗುರುತಾಗಿದೆ. ರಾಜ್ಯದಲ್ಲಿ ಟಿಎಂಸಿ ಅಧಿಕಾರದಲ್ಲಿರುವವರೆಗೂ ಯಾವುದೇ ಅಭಿವೃದ್ಧಿ ಇರುವುದಿಲ್ಲ. ಟಿಎಂಸಿಯನ್ನು ಅಧಿಕಾರದಿಂದ ತೆಗೆದುಹಾಕಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಅಪರಾಧಿಗಳು ಮತ್ತು ಭ್ರಷ್ಟರು ಜೈಲಿನಲ್ಲಿರಬೇಕೇ ಹೊರತು ಅಧಿಕಾರದಲ್ಲಿರಬಾರದು ಎಂದು ಮೋದಿ ಕಿಡಿ ಕಾರಿದ್ದಾರೆ.


ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ನೋಡಲು ಸಭಾಂಗಣದಲ್ಲಿ ಜಾಗವಿಲ್ಲದ ಕಾರಣದಿಂದ ಜನರು ಡಿಡಿ ಚಾನೆಲ್​ ವಾಹನದ ಹೊರಗಿನ ಸ್ಕ್ರೀನ್​ನಲ್ಲಿ ಮೋದಿಯವರ ಭಾಷಣವನ್ನು ಕಣ್ತುಂಬಿಕೊಂಡು ಅಭಿಮಾನ ಮೆರೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ