
ಭೂಪಾಲ್: ಮಧ್ಯಪ್ರದೇಶ ರಾಜ್ಯದ ಸಾಗರ್ ಜಿಲ್ಲೆಯ ಧಾನ ಪ್ರದೇಶದಲ್ಲಿ ತರಬೇತಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ತರಬೇತುದಾರ ಮಹಿಳಾ ಟ್ರೈನಿ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶಿಮೆಸ್ ಏವಿಯೇಷನ್ ಅಕಾಡೆಮಿಗೆ ಸೇರಿದ ಸಿಂಗಲ್ ಎಂಜಿನ್ ವಿಮಾನ ಪತನಗೊಳ್ಳಲು ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ವಿಮಾನದಲ್ಲಿ ತರಬೇತಿ ಪಡೆಯುತ್ತಿದ್ದ 22 ವರ್ಷದ ಮಹಿಳಾ ಟ್ರೈನಿ ಪೈಲಟ್ ಸುರಕ್ಷಿತರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರನ್ವೇಯಲ್ಲಿ ಆಯತಪ್ಪಿದ ವಿಮಾನ ಪೊದೆಗಳತ್ತ ಸಾಗಿ ಮಗುಚಿಬಿದ್ದಿದೆ.
ಮಧ್ಯಪ್ರದೇಶದಲ್ಲಿ ಕಳೆದ 18 ತಿಂಗಳಲ್ಲಿ ನಡೆಯುತ್ತಿರುವ 2ನೇ ವಿಮಾನ ಪತನ ಇದಾಗಿದೆ. 2020ರಲ್ಲಿ ಜನವರಿ ತಿಂಗಳಲ್ಲಿ ಇದೇ ರೀತಿ ತರಬೇತಿ ವಿಮಾನ ಪತನಗೊಂಡಿತ್ತು. ರನ್ವೇಯಲ್ಲಿ ವಿಮಾನ ಪತನವಾಗಿ ವಿಮಾನದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದರು.
ಇದನ್ನೂ ಓದಿ:
ಸೈಬೀರಿಯಾ ಬಳಿ ನಾಪತ್ತೆಯಾಗಿದ್ದ ರಷ್ಯಾದ ವಿಮಾನ ಪತ್ತೆ; 18 ಪ್ರಯಾಣಿಕರೂ ಸೇಫ್
ಯಡಿಯೂರಪ್ಪ ರಾಜೀನಾಮೆ..? ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಯಡಿಯೂರಪ್ಪಗೆ ವಾಪಸ್ ಬರುವಂತೆ ಅಮಿತ್ ಶಾ ಸೂಚಿಸಿದ್ದೇಕೆ?
(Trainer Aircraft Crashes in Madhya Pradesh Sagar District Female Trainee Safe Plane Crash)