ಪಾಕಿಸ್ತಾನ ಸೇನೆಯ ಏಜೆಂಟ್ ಆಗಿದ್ದೆ, ಮುಂಬೈ ಸ್ಫೋಟದಲ್ಲಿ ಭಾಗಿಯಾಗಿದ್ದೆ; ತಹವ್ವೂರ್ ರಾಣಾ ಬಿಚ್ಚಿಟ್ಟ ಸತ್ಯಗಳಿವು
26/11 ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಕಿಂಗ್ ಪಿನ್ಗಳಲ್ಲಿ ಒಬ್ಬರಾದ ತಹವ್ವೂರ್ ಹುಸೇನ್ ರಾಣಾ ಎನ್ಐಎ ವಿಚಾರಣೆ ವೇಳೆ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ತಾನು ಪಾಕಿಸ್ತಾನ ಸೇನೆಯ ವಿಶ್ವಾಸಾರ್ಹ ಏಜೆಂಟ್ ಆಗದ್ದು, ನನ್ನನ್ನು ಸೌದಿ ಅರೇಬಿಯಾಕ್ಕೆ ರಹಸ್ಯ ಕಾರ್ಯಾಚರಣೆಗೆ ಕಳುಹಿಸಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ ತಹವ್ವೂರ್ ರಾಣಾ ತಾನು ಪಾಕಿಸ್ತಾನ ಸೇನೆಯ ವಿಶ್ವಾಸಾರ್ಹ ಏಜೆಂಟ್ ಆಗಿದ್ದೆ. ಮುಂಬೈನ ಹಲವಾರು ಪ್ರದೇಶಗಳ ಮಾಹಿತಿ ಸಂಗ್ರಹಿಸಿದ್ದೆ ಎಂದು ಒಪ್ಪಿಕೊಂಡಿದ್ದಾರೆ.

ನವದೆಹಲಿ, ಜುಲೈ 7: 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ತಹವ್ವೂರ್ ಹುಸೇನ್ ರಾಣಾ ಮುಂಬೈ ಹತ್ಯಾಕಾಂಡದ ಸಮಯದಲ್ಲಿ ತಾನು ಮುಂಬೈನಲ್ಲಿಯೇ ಇದ್ದೆ ಎಂದು ಒಪ್ಪಿಕೊಂಡಿದ್ದಾರೆ. ಹಾಗೇ, ತಾನು ಪಾಕಿಸ್ತಾನ ಸೇನೆಯ ವಿಶ್ವಾಸಾರ್ಹ ಏಜೆಂಟ್ ಆಗಿದ್ದೆ ಎಂದು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಗೊಂಡ ಬಳಿಕ NIA ಕಸ್ಟಡಿಯಲ್ಲಿರುವ ರಾಣಾ ವಿಚಾರಣೆಯ ಸಮಯದಲ್ಲಿ, 26/11 ದಾಳಿಯ ಸಮಯದಲ್ಲಿ ಮುಂಬೈನಲ್ಲಿಯೇ ಇದ್ದೆ ಎಂದು ದೃಢಪಡಿಸಿದ್ದಾರೆ. ಆ ದಾಳಿ ಭಯೋತ್ಪಾದಕರ ಯೋಜನೆಯ ಭಾಗವಾಗಿತ್ತು ಎಂದಿದ್ದಾರೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಎನ್ಐಎ ವಶದಲ್ಲಿರುವ ತಹವ್ವೂರ್ ರಾಣಾ, ಮುಂಬೈ ಅಪರಾಧ ಶಾಖೆಗೆ ವಿಚಾರಣೆಯ ಸಮಯದಲ್ಲಿ ತಾನು, ತನ್ನ ಸ್ನೇಹಿತ ಡೇವಿಡ್ ಕೋಲ್ಮನ್ ಹೆಡ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಜೊತೆ ಹಲವಾರು ತರಬೇತಿಗಳನ್ನು ನಡೆಸಿರುವುದಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಎಲ್‌ಇಟಿ ಮುಖ್ಯವಾಗಿ ಬೇಹುಗಾರಿಕೆ ಜಾಲವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ರಾಣಾ ಹೇಳಿದ್ದಾರೆ. ಮುಂಬೈ ದಾಳಿಗೂ ಮುನ್ನ ತಾನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಂತಹ ಸ್ಥಳಗಳನ್ನು ಪರಿಶೀಲಿಸಿದ್ದಾಗಿ ಮತ್ತು 26/11 ದಾಳಿಯನ್ನು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸಹಯೋಗದೊಂದಿಗೆ ನಡೆಸಲಾಗಿದೆ ಎಂದು ರಾಣಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತಕ್ಕೆ ಬರಲಿರುವ ಉಗ್ರ ತಹವ್ವೂರ್ ರಾಣಾ; ಮುಂಬೈ ದಾಳಿಯಲ್ಲಿ ಈತನ ಪಾತ್ರವೇನು?
ಖಲೀಜ್ ಯುದ್ಧದ ಸಮಯದಲ್ಲಿ ಪಾಕಿಸ್ತಾನ ಸೇನೆಯಿಂದ ಸೌದಿ ಅರೇಬಿಯಾಕ್ಕೆ ಕಳುಹಿಸಲ್ಪಟ್ಟಿದ್ದಾಗಿ 64 ವರ್ಷದ ತಹವ್ವೂರ್ ರಾಣಾ ಹೇಳಿದ್ದಾರೆ. ಈ ವಿಚಾರಣೆಯ ನಂತರ, ಮುಂಬೈ ಪೊಲೀಸರು ರಾಣಾ ಅವರನ್ನು ಆದಷ್ಟು ಬೇಗ ಬಂಧಿಸಿ ವಶಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಪಾಕಿಸ್ತಾನ ಮೂಲದ ಕೆನಡಾದ ಪ್ರಜೆಯಾದ ರಾಣಾ ಅವರನ್ನು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು. ಏಪ್ರಿಲ್ 4ರಂದು ಯುಎಸ್ ಸುಪ್ರೀಂ ಕೋರ್ಟ್ ರಾಣಾ ಅವರ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನಂತರ ಅವರನ್ನು ಹಸ್ತಾಂತರಿಸಲಾಗಿತ್ತು.
ಮೇ ತಿಂಗಳಲ್ಲಿ ಭಾರತಕ್ಕೆ ಕರೆತಂದ ನಂತರ ರಾಣಾ ಅವರನ್ನು ಎನ್‌ಐಎ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಪಿತೂರಿ, ಕೊಲೆ, ಭಯೋತ್ಪಾದಕ ಕೃತ್ಯ ಎಸಗುವುದು ಮತ್ತು ನಕಲಿ ದಾಖಲೆ ಸೇರಿದಂತೆ ಹಲವು ಆರೋಪಗಳಿಗೆ ಸಂಬಂಧಿಸಿದಂತೆ ಅವರ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ತಿಂಗಳು, ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ರಾಣಾ ಅವರ ಕುಟುಂಬ ಸದಸ್ಯರೊಂದಿಗೆ ಒಮ್ಮೆ ದೂರವಾಣಿಯಲ್ಲಿ ಮಾತನಾಡಲು ಅನುಮತಿ ನೀಡಿತ್ತು. ಜೈಲು ಅಧಿಕಾರಿಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಎನ್‌ಐಎ ಒಂದು ಫೋನ್ ಕರೆಗೆ ಅನುಮತಿ ನೀಡಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ರಾಣಾ ಅವರನ್ನು ಹಾಜರುಪಡಿಸಿದ ನಂತರ ನ್ಯಾಯಾಲಯವು ಜುಲೈ 9ರವರೆಗೆ ರಾಣಾ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತ್ತು.
ಇದನ್ನೂ ಓದಿ: India-Pakistan War Updates; ಪಾಕಿಸ್ತಾನದ ಸರ್ಗೋಢಾ ವಾಯುನೆಲೆ ಮೇಲೆ ಭಾರತ ದಾಳಿ, ಪಾಕಿಸ್ತಾನಿಗಳು ಕಂಗಾಲು
10 ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ 26/11 ಮುಂಬೈ ದಾಳಿಯು ತಾಜ್ ಮತ್ತು ಒಬೆರಾಯ್ ಹೋಟೆಲ್‌ಗಳು, ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಯಹೂದಿ ಕೇಂದ್ರ ನಾರಿಮನ್ ಹೌಸ್ ಸೇರಿದಂತೆ ಪ್ರಮುಖ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ನಡೆದಿತ್ತು. ಸುಮಾರು 60 ಗಂಟೆಗಳ ಕಾಲ ನಡೆದ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




