ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ ಬಳಸಿರುವುದು ನಿಜ; ಟಿಟಿಡಿ ಸ್ಪಷ್ಟನೆ

|

Updated on: Sep 20, 2024 | 4:22 PM

ತಿರುಮಲ ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವಾದ ಲಡ್ಡುವಿನ ತಯಾರಿಕೆಗೆ ಕಳಪೆ ಗುಣಮಟ್ಟದ ವಸ್ತುಗಳು, ದನದ ಕೊಬ್ಬು ಹಾಗೂ ಮೀನಿನೆಣ್ಣೆ ಇರುವ ತುಪ್ಪವನ್ನು ಬಳಸಲಾಗಿತ್ತು ಎಂಬುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಈ ವಿಚಾರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಮಾತ್ರವಲ್ಲದೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈ ಲಡ್ಡು ವಿವಾದದ ಕುರಿತು ಸುದ್ದಿಗೋಷ್ಠಿಯಲ್ಲಿ ಟಿಟಿಡಿ ಸ್ಪಷ್ಟನೆ ನೀಡಿದೆ.

ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ ಬಳಸಿರುವುದು ನಿಜ; ಟಿಟಿಡಿ ಸ್ಪಷ್ಟನೆ
ತಿರುಪತಿ
Follow us on

ತಿರುಪತಿ: ತಿರುಪತಿ ದೇವಸ್ಥಾನದ ಲಡ್ಡು ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಸ್ಪಷ್ಟನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಎಕ್ಸ್‌ಕ್ಯೂಟೀವ್‌ ಆಫೀಸರ್‌ ಶ್ಯಾಮಲ ರಾವ್ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಮಾಡಿರೋದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಈ ಪ್ರಸಾದಕ್ಕೆ ಬಳಸುವ ತುಪ್ಪದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿ ಟೆಸ್ಟ್‌ ಮಾಡಲಾಗಿತ್ತು. ಲ್ಯಾಬ್‌ನ ವರದಿಯಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬುದು ದೃಢಪಟ್ಟಿದೆ. ಗುಜರಾತ್‌ನ ಎನ್‌ಡಿಡಿಬಿ ಸಿಎಎಲ್‌ಎಫ್‌ ಲ್ಯಾಬ್‌ನ ವರದಿಯಲ್ಲಿ ದೃಢಪಟ್ಟಿದೆ. ಲಡ್ಡು ತಯಾರಿಕೆಗೆ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ದನದ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್‌, ಸೋಯಾಬಿನ್‌, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಬೆರೆಸಿದ ಕಡಿಮೆ ಗುಣಮಟ್ಟವಿರುವ ತುಪ್ಪ ಪೂರೈಸಲಾಗಿದೆ. ತುಪ್ಪ ಪೂರೈಸಿದ ಎಆರ್ ಡೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಟಿಟಿಡಿ ಸಿಇಓ ಶ್ಯಾಮಲ ರಾವ್ ಹೇಳಿದ್ದಾರೆ.

ಟಿಟಿಡಿ ಬಳಿ ಲ್ಯಾಬ್‌ ಇಲ್ಲದಿರುವುದರಿಂದ ಈ ಹಿಂದೆ ಟೆಸ್ಟ್‌ ಮಾಡಿರಲಿಲ್ಲ. 20:32ರಷ್ಟು ಕಲಬೆರಕೆ ತುಪ್ಪ ಇರುವುದು ದೃಢಪಟ್ಟಿದೆ. ಹಿಂದಿನ ಸರ್ಕಾರ ತುಪ್ಪ ಪೂರೈಕೆಗೆ 5 ಕಂಪನಿಗಳನ್ನು ಅಂತಿಮಗೊಳಿಸಿತ್ತು ಎಂದು ಶ್ಯಾಮಲ ರಾವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Tirupati Laddu: ಭಕ್ತರಿಗೆ ದೊಡ್ಡ ಶಾಕ್; ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ದೃಢ

ಈ ಮೊದಲೇ ಸಿಎಂ ಹೇಳಿದ್ದರು:

ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು ಆಂಧ್ರ ಪ್ರದೇಶದ ಸಿಎಂ ಈ ಹಿಂದೆ ಪ್ರಸ್ತಾಪಿಸಿದ್ದರು ಎಂದು ಟಿಟಿಡಿ ಸಿಇಓ ಶ್ಯಾಮಲ ರಾವ್ ಹೇಳಿದ್ದಾರೆ.

ಬುಧವಾರ ನಡೆದ ಎನ್‌ಡಿಎ ಸಭೆಯಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್‌ಸಿಪಿ ಆಡಳಿತವು ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಪ್ರತಿಪಾದಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

ತಿರುಮಲವನ್ನು ಭಕ್ತರು ಲಡ್ಡು ಪ್ರಸಾದವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ. ಶ್ರೀವಾರಿ ಲಡ್ಡು ಗುಣಮಟ್ಟದ ಬಗ್ಗೆ ಕೆಲವು ಸಮಯದಿಂದ ದೂರುಗಳಿವೆ ಎಂದು ಶ್ಯಾಮಲ ರಾವ್ ಪ್ರಸ್ತಾಪಿಸಿದ್ದರು. ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ಬಗ್ಗೆ ದೂರುಗಳಿವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ತುಪ್ಪದ ಗುಣಮಟ್ಟ ಉತ್ತಮವಾಗಿಲ್ಲ ಎಂದು ಅನೇಕ ಭಕ್ತರು ದೂರಿದ್ದಾರೆ. ಲಡ್ಡುವಿನ ಗುಣಮಟ್ಟ ಚೆನ್ನಾಗಿದ್ದರೆ ತುಪ್ಪದ ಗುಣಮಟ್ಟ ಚೆನ್ನಾಗಿರಬೇಕು. ಲಡ್ಡೂ ತಯಾರಿಸಲು ಉತ್ತಮ ಗುಣಮಟ್ಟದ ಹಸುವಿನ ತುಪ್ಪವನ್ನು ಬಳಸಬೇಕು. ನಾವು ತುಪ್ಪದ ಗುಣಮಟ್ಟವನ್ನೂ ಗಮನಿಸಿದ್ದೇನೆ ಎಂದು ಟಿಟಿಡಿ ಅಧಿಕಾರಿ ಶ್ಯಾಮಲ ರಾವ್ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಪತ್ತೆ; ಆಂಧ್ರ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಸರ್ಕಾರ

ತುಪ್ಪದ ಗುಣಮಟ್ಟವನ್ನು ನಿರ್ಧರಿಸಲು ಟಿಟಿಡಿ ತನ್ನದೇ ಆದ ಪರೀಕ್ಷಾ ಪ್ರಯೋಗಾಲಯವನ್ನು ಹೊಂದಿಲ್ಲ ಮತ್ತು ಅಧಿಕಾರಿಗಳು ಈ ಹಿಂದೆ ತುಪ್ಪದ ಗುಣಮಟ್ಟದ ಪರೀಕ್ಷೆಗಳನ್ನು ಮಾಡಿಲ್ಲ. ಗುಣಮಟ್ಟದ ಭರವಸೆಗಾಗಿ ಹೊರಗಿನ ಲ್ಯಾಬ್ ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ ಎಂದರು. 75 ಲಕ್ಷ ವೆಚ್ಚದ ಲ್ಯಾಬ್ ಅನ್ನು ಏಕೆ ಸ್ಥಾಪಿಸಿಲ್ಲ ಎಂದು ತಿಳಿಯುತ್ತಿಲ್ಲ ಎಂದರು. ಅದೇ ತುಪ್ಪದ ಪೂರೈಕೆದಾರರಿಗೆ ಅವಕಾಶವಾಗಿ ಪರಿಣಮಿಸಿದೆ. ತುಪ್ಪ ಪರೀಕ್ಷೆಗೆ ಸ್ವಂತ ಲ್ಯಾಬ್ ಇಲ್ಲದ ಕಾರಣ ಹೊರಗಿನ ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸಿಲ್ಲ. ಕಡಿಮೆ ದರದಲ್ಲಿ ತುಪ್ಪ ಪೂರೈಕೆಯಾಗುತ್ತಿದೆ ಎಂದರೆ ಗುಣಮಟ್ಟ ಇಲ್ಲದಂತಾಗಿದೆ. ಈ ಬಗ್ಗೆ ತುಪ್ಪ ಪೂರೈಕೆದಾರರಿಗೂ ಎಚ್ಚರಿಕೆ ನೀಡಲಾಗಿದೆ. ಎಆರ್ ಡೈರಿ ಹೊರತುಪಡಿಸಿ ಇತರೆ ಕಂಪನಿಗಳು ಪೂರೈಸುವ ತುಪ್ಪ ಉತ್ತಮವಾಗಿದೆ. ಎಆರ್ ಡೈರಿಯಿಂದ ಪೂರೈಕೆಯಾಗುವ 4 ಟ್ಯಾಂಕ್ ಗಳ ಗುಣಮಟ್ಟ ಇಲ್ಲ ಎಂಬುದು ಗೊತ್ತಾಗಿದೆ. ಹೊರಗಿನ ಪ್ರಯೋಗಾಲಯಗಳಲ್ಲಿ ತುಪ್ಪವನ್ನು ಪರೀಕ್ಷಿಸಲಾಗಿದೆ ಎಂದು ಶ್ಯಾಮಲ ರಾವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:02 pm, Fri, 20 September 24