Tirupati Laddu: ಭಕ್ತರಿಗೆ ದೊಡ್ಡ ಶಾಕ್; ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ದೃಢ
ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದವಾದ ಲಡ್ಡುಗೆ ತನ್ನದೇ ಆದ ವಿಶೇಷ ರುಚಿಯಿದೆ. ಬೇರೆಲ್ಲೂ ಲಡ್ಡುಗೆ ಈ ರುಚಿ ಇರುವುದಿಲ್ಲ ಎಂಬ ಕಾರಣಕ್ಕೆ ಇಲ್ಲಿಗೆ ತೆರಳುವ ಭಕ್ತರ ಪೈಕಿ ಹಲವರು ಈ ಪ್ರಸಾದಕ್ಕಾಗಿಯೇ ಕ್ಯೂನಲ್ಲಿ ನಿಂತು ಲಡ್ಡುಗಳನ್ನು ಖರೀದಿಸುತ್ತಾರೆ. ಆದರೆ, ಸಸ್ಯಾಹಾರಿ ಭಕ್ತರಿಗೆ ದೊಡ್ಡ ಆಘಾತಕಾರಿ ವಿಷಯವೊಂದನ್ನು ಲ್ಯಾಬ್ ವರದಿ ಬೆಳಕಿಗೆ ತಂದಿದೆ. ತಿರುಪತಿಯಲ್ಲಿ ತಯಾರಿಸಲಾಗುವ ಲಡ್ಡುವನ್ನು ದನದ ಕೊಬ್ಬು, ಮೀನಿನ ಎಣ್ಣೆ ಬಳಸಿ ತಯಾರಿಸಲಾಗುತ್ತಿತ್ತು ಎಂದು ವರದಿ ಖಚಿತಪಡಿಸಿದೆ.
ತಿರುಪತಿ: ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ತಿರುಪತಿಯ ಭಕ್ತರ ನಂಬಿಕೆಗೆ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಧಕ್ಕೆ ತಂದಿದೆ ಎಂದು ಟಿಟಿಡಿ ಅಧಿಕಾರಿಗಳು ವಾದಿಸಿದ್ದರು. ಟಿಟಿಡಿ ಮಾಜಿ ಮುಖ್ಯಸ್ಥರು ಚಂದ್ರಬಾಬು ನಾಯ್ಡು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆದರೆ, ಚಂದ್ರಬಾಬು ನಾಯ್ಡು ಅವರ ಆರೋಪ ಸತ್ಯ ಎಂಬುದು ಇದೀಗ ಬಂದಿರುವ ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.
ಪ್ರಾಣಿಗಳ ಕೊಬ್ಬು ಬಳಸಿ ಲಡ್ಡು ತಯಾರಿಸಿದ್ದಾಗಿ ಟಿಟಿಡಿಯಿಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಅಧಿಕೃತ ಸ್ಪಷ್ಟನೆ ನೀಡಲಾಗಿದೆ. ಲ್ಯಾಬ್ ವರದಿ ಬಿಡುಗಡೆ ಮಾಡಿ ಟಿಟಿಡಿ ಆಡಳಿತ ಮಂಡಳಿಯಿಂದ ಸ್ಪಷ್ಟನೆ ನೀಡಲಾಗಿದೆ. ತಿರುಪತಿಯ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಇರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಇದರಲ್ಲಿ ಹಂದಿಯ ಕೊಬ್ಬು, ದನದ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆ ಜೋಳ ಎಣ್ಣೆ ಬೆರೆಸಿದ ಕಡಿಮೆ ಗುಣಮಟ್ಟದ ತುಪ್ಪ ಬಳಕೆ ಮಾಡಲಾಗುತ್ತಿದೆ ಎಂದು ಖಚಿತವಾಗಿದೆ.
ಇದನ್ನೂ ಓದಿ: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆ, ಚಂದ್ರಬಾಬು ನಾಯ್ಡು ಗಂಭೀರ ಆರೋಪ
ತಿರುಪತಿ ಲಡ್ಡುವನ್ನು ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿತರಿಸಲಾಗುತ್ತದೆ. ಈ ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ನಡೆಸುತ್ತದೆ. ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ಪ್ರಸಾದವಾಗಿ ವಿತರಿಸಲು ಗೋಮಾಂಸ ಟ್ಯಾಲೋ, ಮೀನಿನ ಎಣ್ಣೆ ಮತ್ತು ಪಾಮ್ ಆಯಿಲ್ ಅನ್ನು ಬಳಸಲಾಗುತ್ತಿದೆ ಎಂದು ಲ್ಯಾಬ್ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ.
Breaking: Test report confirms beef fat, fish oil used in making laddus at Tirupati Temple.
Massive betrayal of Hindu Aastha! pic.twitter.com/J1hdV2J9MW
— Rahul Shivshankar (@RShivshankar) September 19, 2024
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬುಧವಾರ ಆರೋಪಿಸಿದ್ದರು. ಆದರೆ, ವೈಎಸ್‌ಆರ್‌ಸಿಪಿ ಈ ಆರೋಪವನ್ನು ತಳ್ಳಿ ಹಾಕಿತ್ತು.
ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಕೆಎಂಎಫ್ ಅಧ್ಯಕ್ಷ ಸ್ಪಷ್ಟನೆ
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ಪ್ರಸಾದವನ್ನು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ಗೋಮಾಂಸ ಟ್ಯಾಲೋ ಮತ್ತು ಮೀನಿನ ಎಣ್ಣೆ ಸೇರಿದಂತೆ ಪ್ರಾಣಿಗಳ ಕೊಬ್ಬಿನ ಕುರುಹುಗಳಿವೆ ಎಂದು ವರದಿಯು ತನ್ನ ಸಂಶೋಧನೆಗಳಲ್ಲಿ ಬಹಿರಂಗಪಡಿಸಿದೆ. ಇದು ಭಾರೀ ಆಕ್ರೋಶ ಮತ್ತು ಧಾರ್ಮಿಕ ಭಾವನೆಗಳಿಗೆ ಅಗೌರವದ ಆರೋಪಗಳನ್ನು ಹುಟ್ಟುಹಾಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Thu, 19 September 24