ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಪತ್ತೆ; ಆಂಧ್ರ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಸರ್ಕಾರ

ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ನೀಡಲಾದ ಲಡ್ಡುವಿನ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವುದು ದೃಢಪಟ್ಟಿದೆ. ಈ ಕುರಿತು ಲ್ಯಾಬ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆ ಬೆಳಕಿಗೆ ಬಂದ ನಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ತೀವ್ರ ಚರ್ಚೆಯಾಗುತ್ತಿದೆ. ಈ ಪ್ರಕರಣದಲ್ಲಿ ಇದೀಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ.

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಪತ್ತೆ; ಆಂಧ್ರ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಸರ್ಕಾರ
ಜೆ.ಪಿ. ನಡ್ಡಾ
Follow us
|

Updated on: Sep 20, 2024 | 3:25 PM

ಹೈದರಾಬಾದ್: ಪ್ರಸಿದ್ಧ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ವರದಿ ಕೇಳಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ವರದಿಯನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಖಚಿತಪಡಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರು ಇಂದು ಈ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತನಾಡಿದ್ದಾರೆ. ಪ್ರಸಿದ್ಧ ತಿರುಪತಿ ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಇತರ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಕೇಳಿದ್ದಾರೆ.

ಇದನ್ನೂ ಓದಿ: Tirupati Laddu: ಭಕ್ತರಿಗೆ ದೊಡ್ಡ ಶಾಕ್; ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ದೃಢ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜೆ.ಪಿ. ನಡ್ಡಾ, ಆಂಧ್ರ ಸರ್ಕಾರ ಸಲ್ಲಿಸುವ ವರದಿಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪರಿಶೀಲಿಸಲಿದ್ದು, ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಹ್ಲಾದ್ ಜೋಶಿ ಕಳವಳ:

ಇನ್ನೊಂದೆಡೆ, ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಆಹಾರ ಸಚಿವ ಪ್ರಹ್ಲಾದ್ ಜೋಶಿ ಇಂದು ಕರೆ ನೀಡಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಹೇಳಿರುವ ಸಂಗತಿ ಗಂಭೀರವಾದ ಕಳವಳಕಾರಿ ವಿಷಯ. ಈ ಬಗ್ಗೆ ವಿವರವಾದ ತನಿಖೆಯ ಅಗತ್ಯವಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: Tirupati Laddu: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು, ತುಪ್ಪದ ಗುಣಮಟ್ಟ ಪರೀಕ್ಷೆಗೆ ಸಮಿತಿ ರಚನೆ

ಬುಧವಾರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿಂದಿನ ವೈಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಸಹ ಬಿಡಲಿಲ್ಲ. ತಿರುಪತಿಯ ಲಡ್ಡುಗಳನ್ನು ತಯಾರಿಸಲು ಕಳಪೆ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಆದರೆ, ಗುರುವಾರ ಹೊರಬಿದ್ದ ಲ್ಯಾಬ್ ವರದಿಯಲ್ಲಿ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ಇತರೆ ಕಳಪೆ ಉತ್ಪನ್ನಗಳನ್ನು ಬಳಸಿರುವುದು ದೃಢಪಟ್ಟಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ