ಕೇರಳದಲ್ಲಿ ಎರಡು ದಿನಗಳ ಮುಷ್ಕರ ಅನಗತ್ಯ, ಇದು ವ್ಯವಹಾರಗಳಿಗೆ ಭಾರಿ ನಷ್ಟವುಂಟುಮಾಡಬಹುದು: ವ್ಯಾಪಾರ ಮತ್ತು ಕೈಗಾರಿಕೆ ತಜ್ಞರು

| Updated By: ರಶ್ಮಿ ಕಲ್ಲಕಟ್ಟ

Updated on: Mar 27, 2022 | 2:02 PM

ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಮುಷ್ಕರ ಬಂದ್ ಆಗಿರುವುದರಿಂದ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮಾರ್ಚ್ 31 ರೊಳಗೆ ಜಿಎಸ್ ಟಿ ವಾರ್ಷಿಕ ರಿಟರ್ನ್ಸ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಾವು ಸಾಕಷ್ಟು ಪೇಪರ್‌ಗಳನ್ನು ಸಲ್ಲಿಸಬೇಕಾಗಿದೆ. ಒಂದು ದಿನದ ವಿಳಂಬವೂ ಸಹ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ....

ಕೇರಳದಲ್ಲಿ ಎರಡು ದಿನಗಳ ಮುಷ್ಕರ ಅನಗತ್ಯ, ಇದು ವ್ಯವಹಾರಗಳಿಗೆ ಭಾರಿ ನಷ್ಟವುಂಟುಮಾಡಬಹುದು: ವ್ಯಾಪಾರ ಮತ್ತು ಕೈಗಾರಿಕೆ ತಜ್ಞರು
ಪ್ರಾತಿನಿಧಿಕ ಚಿತ್ರ
Follow us on

ಕೊಚ್ಚಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ರೈತರು, ಕಾರ್ಮಿಕರು, ಸಾಮಾನ್ಯ ಸಾರ್ವಜನಿಕ ಮತ್ತು ಕಾರ್ಮಿಕರ ಮೇಲೆ ಪರಿಣಾಮ ಬೀರುವ ನೀತಿಗಳನ್ನು ವಿರೋಧಿಸಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೇರಳದಲ್ಲಿ(Kerala) ಮುಷ್ಕರಗಳು ಸಾಮಾನ್ಯವಾಗಿ ರಾಜ್ಯದಲ್ಲಿ ಪರಿಣಾಮವನ್ನುಂಟು ಮಾಡುತ್ತವೆ. 48 ಗಂಟೆಗಳ ಕಾಲ ನಡೆಯುವ ಈ ಮುಷ್ಕರ ಕೊವಿಡ್ ಸಾಂಕ್ರಾಮಿಕ (Covid 19) ಪರಿಣಾಮದಿಂದ ಚೇತರಿಸಿಕೊಳ್ಳುವ ವ್ಯವಹಾರಗಳಿಗೆ ಭಾರಿ ನಷ್ಟವನ್ನು ಉಂಟುಮಾಡಬಹುದು ಎಂದು ವ್ಯಾಪಾರ ಮತ್ತು ಕೈಗಾರಿಕೆ ತಜ್ಞರು ಭಾವಿಸುತ್ತಾರೆ ಎಂದು ನ್ಯೂಸ್ 9 ಲೈವ್ ಡಾಟ್ ಕಾಂ ವರದಿ ಮಾಡಿದೆ. ವಾರಾಂತ್ಯದ ನಂತರ ನಡೆಯುವ ಮುಷ್ಕರವು ಕೇರಳದಲ್ಲಿ ದೀರ್ಘಾವಧಿಯ ಸ್ಥಗಿತಕ್ಕೆ ಕಾರಣವಾಗಲಿದ್ದು ಮುಷ್ಕರದ ವಿರುದ್ಧ ವರ್ತಕರು ಮತ್ತು ಉದ್ಯಮ ಸಂಸ್ಥೆಗಳು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿವೆ. ಟಿಕೆಟ್ ದರ ಏರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರದಿಂದ ಜನಸಾಮಾನ್ಯರು, ಅದರಲ್ಲೂ ಅಧಿಕಾರಿಗಳು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆಗೊಳಿಸಿದ್ದರೂ, ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಉತ್ತರ ಕೇರಳದಲ್ಲಿ ಪ್ರಯಾಣದ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗಲಿಲ್ಲ.

ಮುಷ್ಕರಕ್ಕೆ ಸಹಕಾರ ನೀಡುವುದಿಲ್ಲ ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪಾಧ್ಯಕ್ಷ ಪೆರಿಂಗಮಲ ರಾಮಚಂದ್ರನ್ ಹೇಳಿದ್ದಾರೆ. ” ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಮುಷ್ಕರ ಬಂದ್ ಆಗಿರುವುದರಿಂದ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮಾರ್ಚ್ 31 ರೊಳಗೆ ಜಿಎಸ್ ಟಿ ವಾರ್ಷಿಕ ರಿಟರ್ನ್ಸ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಾವು ಸಾಕಷ್ಟು ಪೇಪರ್‌ಗಳನ್ನು ಸಲ್ಲಿಸಬೇಕಾಗಿದೆ. ಒಂದು ದಿನದ ವಿಳಂಬವೂ ಸಹ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಮ್ಮ ರಾಜ್ಯ ಪರಿಷತ್ತು ಮುಷ್ಕರಕ್ಕೆ ಸಹಕರಿಸದಿರಲು ನಿರ್ಧರಿಸಿದೆ. 24 ಗಂಟೆಗಳ ಮುಷ್ಕರದ ವೇಳೆ ತೆರೆದಿರುವ ಎಲ್ಲಾ ಅಂಗಡಿಗಳಿಗೆ ರಕ್ಷಣೆ ನೀಡುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಎರಡು ವರ್ಷಗಳಲ್ಲಿ ನಮ್ಮ ಅಂಗಡಿಗಳು ಮುಚ್ಚಲ್ಪಟ್ಟಿವೆ. “ನಾವು ಸಂಬಳ ಪಡೆಯುವವರಲ್ಲ. ನಮ್ಮ ಅಂಗಡಿಗಳನ್ನು ಮುಚ್ಚುವುದರಿಂದ ನಾವು ಬದುಕಲು ಸಾಧ್ಯವಿಲ್ಲ” ಎಂದು ಎಂದು ರಾಮಚಂದ್ರನ್ ಹೇಳಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕಳುಹಿಸಿರುವ ಪತ್ರದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಸಾಮಾನ್ಯ ಜೀವನ ಮತ್ತು ವ್ಯವಹಾರಗಳು ಎಂದಿನಂತೆ ಕಾರ್ಯನಿರ್ವಹಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ. ಲಾಕ್‌ಡೌನ್ ನಂತರ ದೇಶೀಯ ಪ್ರವಾಸಿಗರಲ್ಲಿ ಹೆಚ್ಚಳವನ್ನು ಕಂಡಿರುವ ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮವು ಮುಷ್ಕರದಿಂದಾಗಿ ಮೇಲಿಂದ ಮೇಲೆ ಹೊಡೆತ ಅನುಭವಿಸಿದೆ.
ಏತನ್ಮಧ್ಯೆ, ಕೊಚ್ಚಿಯ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿನ ಐದು ಕಾರ್ಮಿಕ ಸಂಘಟನೆಗಳು ಬಿಪಿಸಿಎಲ್ ಸಲ್ಲಿಸಿದ ಮನವಿಯ ಆಧಾರದ ಮೇಲೆ ಮುಷ್ಕರದಲ್ಲಿ ಭಾಗವಹಿಸದಂತೆ ಕೇರಳ ಹೈಕೋರ್ಟ್ ನಿರ್ಬಂಧಿಸಿದೆ. ಕೈಗಾರಿಕಾ ವಿವಾದಗಳ ಕಾಯಿದೆಯ ಸೆಕ್ಷನ್ 22 ರ ಅಡಿಯಲ್ಲಿ ಸಾರ್ವಜನಿಕ ಉಪಯುಕ್ತತೆ ಸೇವೆಗಾಗಿ ಮುಷ್ಕರಗಳನ್ನು ನಿಷೇಧಿಸಲಾಗಿದೆ ಎಂದು ಬಿಪಿಸಿಎಲ್ ವಾದಿಸಿದೆ. ಆದರೆ, ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಮುಂದಾಗುವ ಸಾಧ್ಯತೆ ಇದೆ.

ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠವು ಎರಡು ದಿನಗಳ ಮುಷ್ಕರವನ್ನು ಅಸಾಂವಿಧಾನಿಕ ಎಂದು ಘೋಷಿಸುವ ಅರ್ಜಿಯ ವಿಚಾರಣೆ ನಡೆಸಲಿದೆ. 48 ಗಂಟೆಗಳ ಮುಷ್ಕರದ ವಿರುದ್ಧ ಎಸ್ ಚಂದ್ರಚೂಡನ್ ನಾಯರ್ ಎಂಬುವರು ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಎಲ್ಲಾ ವರ್ಗದ ಜನರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಅಧ್ಯಕ್ಷ ಅನಂತಲವಟ್ಟಂ ಆನಂದನ್ ಹೇಳಿದರು. ದ್ವಿಚಕ್ರ ವಾಹನಗಳು ಮತ್ತು ರೈಲುಗಳಲ್ಲಿ ಪ್ರಯಾಣ  ಮಾಡದೆ ಮುಷ್ಕರಕ್ಕೆ ಸಹಕರಿಸುವಂತೆ ಕಾರ್ಮಿಕ ಸಂಘಟನೆಗಳು ಜನರನ್ನು ಒತ್ತಾಯಿಸಿವೆ. ಅಗತ್ಯ ಸೇವೆಗಳಾದ ಆಸ್ಪತ್ರೆಗಳು, ಮೆಡಿಕಲ್ ಶಾಪ್‌ಗಳು, ಹಾಲು, ಮಾಧ್ಯಮ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಅದು ಹೇಳಿದೆ.
ಸೋಮವಾರ ಬೆಳಗ್ಗೆ 6 ಗಂಟೆಗೆ ಮುಷ್ಕರ ಆರಂಭವಾಗಲಿದ್ದು, ಮರುದಿನ ಮಧ್ಯರಾತ್ರಿ 12 ಗಂಟೆಗೆ ಮುಕ್ತಾಯವಾಗಲಿದೆ.

ಇದನ್ನೂ ಓದಿMann Ki Baat: ‘ವೈವಿಧ್ಯತೆ ನಮ್ಮನ್ನು ಒಂದುಗೂಡಿಸುತ್ತದೆ’; ‘ಮನ್​ ಕಿ ಬಾತ್​’ನಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ

Published On - 1:53 pm, Sun, 27 March 22