Mann Ki Baat: ‘ವೈವಿಧ್ಯತೆ ನಮ್ಮನ್ನು ಒಂದುಗೂಡಿಸುತ್ತದೆ’; ‘ಮನ್​ ಕಿ ಬಾತ್​’ನಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ

PM Modi: ಪ್ರಧಾನಿ ನರೇಂದ್ರ ಮೋದಿ 87ನೇ ‘ಮನ್​ ಕಿ ಬಾತ್’ನಲ್ಲಿ ಮಾತನಾಡಿ, ಭಾರತದ ರಫ್ತು ಹಾಗೂ ‘ಮೇಕ್ ಇನ್ ಇಂಡಿಯಾ’ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

Mann Ki Baat: ‘ವೈವಿಧ್ಯತೆ ನಮ್ಮನ್ನು ಒಂದುಗೂಡಿಸುತ್ತದೆ’; ‘ಮನ್​ ಕಿ ಬಾತ್​’ನಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: shivaprasad.hs

Updated on:Mar 27, 2022 | 11:56 AM

ಇಂದು (ಭಾನುವಾರ) ‘ಮನ್​ ಕಿ ಬಾತ್​’ನ (Mann Ki Baat) 87ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಭಾರತದ ರಫ್ತು, ‘ಮೇಕ್ ಇನ್ ಇಂಡಿಯಾ’ ಮೊದಲಾದವುಗಳ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. ಭಾರತವು 400 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಸಾಧಿಸಿದೆ ಎಂದಿರುವ ಮೋದಿ, ಇದು ಭಾರತದ ಸಾಮರ್ಥ್ಯ ಸೂಚಿಸುತ್ತದೆ. ವಿಶ್ವದಲ್ಲಿ ಭಾರತೀಯ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುವುದು ಇದರ ಅರ್ಥವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಗವರ್ನಮೆಂಟ್ ಇ-ಮಾರ್ಕೆಟ್​ಪ್ಲೇಸ್​ನ ಪ್ರಯೋಜನ ಉಲ್ಲೇಖಿಸಿದ ಪ್ರಧಾನಿ, ‘‘ಈ ಹಿಂದೆ, ದೊಡ್ಡ ಉದ್ದಿಮೆದಾರರು ಮಾತ್ರ ಸರ್ಕಾರಕ್ಕೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂದು ನಂಬಲಾಗಿತ್ತು. ಆದರೆ ಗವರ್ನ್​ಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್ ಇದನ್ನು ಬದಲಾಯಿಸಿದೆ. ಇದು ನವ ಭಾರತದ ಆತ್ಮವನ್ನು ತೋರಿಸುತ್ತದೆ’’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತ ಆರ್ಥಿಕ ಪ್ರಗತಿಯತ್ತ ದೃಢವಾದ ಹೆಜ್ಜೆ ಇಡುತ್ತಿದ್ದು, ಅದನ್ನು ಸಾಕಾರಗೊಳಿಸಲು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನುಡಿದಿದ್ದಾರೆ. ಇದೇ ವೇಳೆ ಅವರು ಆಯುಷ್​ ವಲಯದಲ್ಲಿ ಸ್ಟಾರ್ಟ್​​ಅಪ್​ಗಳ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಭಾರತವು ಅನೇಕ ಸಂಸ್ಕೃತಿಗಳು, ಭಾಷೆಗಳು ಮತ್ತು ಆಹಾರಗಳಿಂದ ಪುನೀತವಾಗಿದೆ. ನಮ್ಮ ಹಬ್ಬಗಳನ್ನು ಒಟ್ಟಾಗಿ ಆಚರಿಸೋಣ. ವೈವಿಧ್ಯತೆಯು ನಮ್ಮನ್ನು ಒಂದುಗೂಡಿಸುವ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ಇತ್ತೀಚೆಗೆ ಪದ್ಮ ಪ್ರಶಸ್ತಿ ಪುರಸ್ಕೃತರಾದ ಶಿವಾನಂದರನ್ನು ಪ್ರಧಾನಿ ಉಲ್ಲೇಖಿಸಿದರು. ಅವರಿಗೆ ಯೋಗದ ಬಗ್ಗೆ ಒಲವಿದೆ ಎಂದ ಪ್ರಧಾನಿ, ಅವರ ಫಿಟ್​ನೆಸ್ ಹಾಗೂ ಚೈತನ್ಯದ ಬಗ್ಗೆ ದೇಶ ಮಾತನಾಡುತ್ತಿದೆ ಎಂದಿದ್ದಾರೆ.

ಪ್ರಾಣಿ ಕಾಳಜಿಯ ಬಗ್ಗೆ ಉದಾಹರಣೆ ನೀಡಿದ ಪ್ರಧಾನಿ:

ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುವ ಮುಪ್ಪಟಂ ಶ್ರೀನಾರಾಯಣರವರನ್ನು ಪ್ರಧಾನಿ ಉದಾಹರಿಸಿದರು. ಪ್ರಾಣಿಗಳ ಬಗ್ಗೆ ಅವರ ಕಾಳಜಿ ವಿವರಿಸಿದ ಪ್ರಧಾನಿ, ‘‘ಅವರು ಮಣ್ಣಿನ ಪಾತ್ರೆಗಳನ್ನು ವಿತರಿಸುತ್ತಾರೆ. ಇದರಿಂದ ಜನರು ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೀರು ಒದಗಿಸುತ್ತಾರೆ. ಅಂತಹ 1 ಲಕ್ಷ ಪಾತ್ರೆಗಳನ್ನು ನಾರಾಯಣ್ ನೀಡಿದ್ದಾರೆ ಜತೆಗೆ ಅದನ್ನು ಗಾಂಧೀಜಿ ಆಶ್ರಮಕ್ಕೆ ದಾನ ಮಾಡಲಿದ್ದಾರೆ’’ ಎಂದಿದ್ದಾರೆ ಪ್ರಧಾನಿ.

ಪರಿಸರ ಕಾಳಜಿಯ ವ್ಯಕ್ತಿತ್ವವನ್ನು ಉದಾಹರಿಸಿದ ಪ್ರಧಾನಿ:

ಸ್ವಾಭಾವಿಕ ನೀರಿನ ಮೂಲಗಳನ್ನು ರಕ್ಷಿಸಲು ಕೆಲವು ಜನರು ವೈಯಕ್ತಿಕವಾಗಿ ಕೆಲಸ ಮಾಡುವುದನ್ನು ಪ್ರಧಾನಿ ಗುರುತಿಸಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ನಾಸಿಕ್​ನ ಚಂದ್ರಕಿಶೋರ್ ಗೋದಾವರಿ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯುವ ಯತ್ನ ನಡೆಸುತ್ತಾರೆ. ಪುರಿಯ ರಾಹುಲ್ ಮಹಾರಾಣ ಧಾರ್ಮಿಕ ಸ್ಥಳಗಳಲ್ಲಿ ಸಂಗ್ರಹವಾದ ಕಸವನ್ನು ಸ್ವಚ್ಛಗೊಳಿಸುತ್ತಾರೆ’’ ಎಂದು ಪ್ರಧಾನಿ ನುಡಿದಿದ್ದಾರೆ.

‘ಜಲ ಮಂದಿರ ಯೋಜನೆ’ಯ ಮಹತ್ವ:

ಪ್ರಧಾನಿ ತಮ್ಮ ಭಾಷಣದಲ್ಲಿ ‘ಜಲ ಮಂದಿರ ಯೋಜನೆ’ಯ ಮಹತ್ವವನ್ನು ತಿಳಿಸಿದ್ದಾರೆ. ಅದಕ್ಕೆ ತಮ್ಮ ತವರೂರು ಗುಜರಾತ್ಅನ್ನು ಉದಾಹರಿಸಿದ್ದಾರೆ. ‘‘ನಾನು ನೀರಿನ ಕೊರತೆ ಎದುರಿಸುತ್ತಿರುವ ಗುಜರಾತ್‌ನಿಂದ ಬಂದಿದ್ದೇನೆ. ಗುಜರಾತ್‌ನಲ್ಲಿ ನೀರಿಗಾಗಿ ಕಲ್ಯಾಣಿಗಳು ಮಹತ್ವದ್ದಾಗಿವೆ. ಜಲ ಮಂದಿರ ಯೋಜನೆಯು ನೀರಿನ ಸಂರಕ್ಷಣೆ ಮತ್ತು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಒಂದು ಮಹತ್ವದ ತಿರುವು. ಇದು ಅನೇಕ ಪ್ರದೇಶಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಿದೆ’’ ಎಂದಿದ್ದಾರೆ ಪ್ರಧಾನಿ.

‘ಮನ್ ಕಿ ಬಾತ್’ ಅನ್ನು ಆಲ್ ಇಂಡಿಯಾ ರೇಡಿಯೋ, ದೂರದರ್ಶನ, ಪ್ರಧಾನ ಮಂತ್ರಿಗಳ ಕಚೇರಿ (PMO) ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ.

ಇದನ್ನೂ ಓದಿ:

ಟಿಪ್ಪು ಪಠ್ಯ ಪರಿಷ್ಕರಣೆಗೆ ಉತ್ತರ ನೀಡಲು ಮುಹೂರ್ತ ಫಿಕ್ಸ್; ಶಿಕ್ಷಣ ಸಚಿವ ಬಿಸಿ ನಾಗೇಶ್​ರಿಂದ ನಾಳೆಯೇ ಮಾಹಿತಿ

ಭ್ರಮನಿರಸನಗೊಂಡ ಸೈನಿಕರಿಂದ ರಷ್ಯಾದ ಕರ್ನಲ್ ಹತ್ಯೆ: ಉಕ್ರೇನ್​ನಲ್ಲಿ ಸತ್ತ ರಷ್ಯಾ ಸೇನಾಧಿಕಾರಿಗಳ ಸಂಖ್ಯೆ 7ಕ್ಕೆ

Published On - 11:34 am, Sun, 27 March 22