ಭ್ರಮನಿರಸನಗೊಂಡ ಸೈನಿಕರಿಂದ ರಷ್ಯಾದ ಕರ್ನಲ್ ಹತ್ಯೆ: ಉಕ್ರೇನ್​ನಲ್ಲಿ ಸತ್ತ ರಷ್ಯಾ ಸೇನಾಧಿಕಾರಿಗಳ ಸಂಖ್ಯೆ 7ಕ್ಕೆ

ಕಳೆದ ಒಂದು ತಿಂಗಳ ಅವಧಿಯಲ್ಲಿ ಯಾವೊಂದು ನಗರವನ್ನು ವಶಪಡಿಸಿಕೊಳ್ಳಲು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಈವರೆಗೆ ರಷ್ಯಾದ 1351 ಸೈನಿಕರು ಮೃತಪಟ್ಟಿದ್ದು, 3835 ಮಂದಿ ಗಾಯಗೊಂಡಿದ್ದಾರೆ.

ಭ್ರಮನಿರಸನಗೊಂಡ ಸೈನಿಕರಿಂದ ರಷ್ಯಾದ ಕರ್ನಲ್ ಹತ್ಯೆ: ಉಕ್ರೇನ್​ನಲ್ಲಿ ಸತ್ತ ರಷ್ಯಾ ಸೇನಾಧಿಕಾರಿಗಳ ಸಂಖ್ಯೆ 7ಕ್ಕೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 27, 2022 | 10:48 AM

ಕೀವ್: ಉಕ್ರೇನ್ ವಿರುದ್ಧ ರಷ್ಯಾ (Russia Ukraine war) ಸೇನೆ ನಡೆಸುತ್ತಿರುವ ಸೈನಿಕ ಕಾರ್ಯಾಚರಣೆ 31ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ಸೇನೆಯ ಹಿರಿಯ ಕಮಾಂಡರ್ ಒಬ್ಬರನ್ನು ರಷ್ಯಾ ಸೈನಿಕರೇ ಕೊಂದಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಉಕ್ರೇನ್​ನ ಸೈನಿಕ ಬಲವನ್ನು ತಪ್ಪಾಗಿ ಅಂದಾಜು ಮಾಡಿದ್ದ ರಷ್ಯಾ ಕೆಲವೇ ದಿನಗಳಲ್ಲಿ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿತ್ತು. ಆದರೆ ಉಕ್ರೇನ್ ಬಲವಾಗಿ ಕಾಲೂರಿ ನಿಂತು ಸೆಣೆಸುತ್ತಿದ್ದು, ರಷ್ಯಾ ಪಡೆಗಳಲ್ಲಿ ಸಾವುನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಉಕ್ರೇನ್​ನಲ್ಲಿ ಈವರೆಗೆ ರಷ್ಯಾ ಸೇನೆಯ 7 ಉನ್ನತ ಅಧಿಕಾರಿಗಳು ಮೃತಪಟ್ಟಿದ್ದಾರೆ. ಈ ಪೈಕಿ 7ನೆಯವರಾಗಿ ಮೃತಪಟ್ಟವರ ಹೆಸರು ಲೆಫ್ಟಿನೆಂಟ್ ಜನರಲ್ ಜಾಕೊವ್ ರೆಝೆನ್​ಸ್ಟೆವ್. ರಷ್ಯಾ ಸೇನೆಯ ದಕ್ಷಿಣ ಮಿಲಿಟರಿ ವಲಯದ 49ನೇ ಸಮಗ್ರ ತುಕಡಿಯ ಕಮಾಂಡರ್ ಆಗಿದ್ದರು. ಉಕ್ರೇನ್ ವಿರುದ್ಧ ರಷ್ಯಾ ದಾಳಿ ಆರಂಭಿಸಿದ 4ನೇ ದಿನ ಪ್ರತಿಕ್ರಿಯಿಸಿದ್ದ ಜಾಕೊವ್, ‘ಕೆಲವೇ ಗಂಟೆಗಳಲ್ಲಿ ಯುದ್ಧ ಮುಗಿಯಲಿದೆ’ ಎಂದು ಹೇಳಿದ್ದರು. ಆದರೆ ತಿಂಗಳು ಕಳೆದರೂ ಯುದ್ಧ ಮುಗಿಯಲಿಲ್ಲ. ಬೇಗ ಮುಗಿಯಬಹುದು ಎಂದು ತರಾತುರಿಯಲ್ಲಿ ಉಕ್ರೇನ್​ಗೆ ನುಗ್ಗಿದ್ದ ರಷ್ಯಾ ಸೇನೆಯಲ್ಲಿ ಇದೀಗ ಹತಾಶೆಯ ಮನೋಭಾವ ಕಾಣಿಸಿಕೊಂಡಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಯಾವೊಂದು ನಗರವನ್ನು ವಶಪಡಿಸಿಕೊಳ್ಳಲು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಈವರೆಗೆ ರಷ್ಯಾದ 1351 ಸೈನಿಕರು ಮೃತಪಟ್ಟಿದ್ದು, 3835 ಮಂದಿ ಗಾಯಗೊಂಡಿದ್ದಾರೆ. ದಿನಕಳೆದಂತೆ ಉಕ್ರೇನ್​ಗೆ ಇತರ ದೇಶಗಳಿಂದ ಹೆಚ್ಚಿನ ನೆರವು ಹರಿದುಬರುತ್ತಿದೆ. ಆದರೆ ರಷ್ಯಾ ಆರ್ಥಿಕವಾಗಿ ಜರ್ಝರಿತವಾಗುತ್ತಿದ್ದು, ರಷ್ಯಾದ ಸೈನಿಕರಲ್ಲಿ ಬೇಗ ಯುದ್ಧ ಮುಗಿಯುತ್ತಿಲ್ಲ ಎಂಬ ಹತಾಶೆ ಕಾಡುತ್ತಿದೆ.

ಕೀವ್ ನಗರದ ಪಶ್ಚಿಮ ಭಾಗದಲ್ಲಿರುವ ಪಟ್ಟಣ ಮಕರಿವ್​ನಲ್ಲಿ ಹತಾಶ ಸೈನಿಕರು ತಮ್ಮ ಕಮಾಂಡರ್ ವಿರುದ್ಧವೇ ಬಂಡೆದ್ದು ಕೊಲೆ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆಗಳು ಹೇಳಿವೆ. ತಮ್ಮ ತುಕಡಿಯ ಅರ್ಧಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರಿಂದ ಸಿಟ್ಟಿಗೆದ್ದ ರಷ್ಯಾ ಸೈನಿಕರು ತಮ್ಮ ಕಮಾಂಡರ್ ಮೇಲೆಯೇ ಟ್ಯಾಂಕ್​ ಹರಿಸಿ ಕೊಂದುಹಾಕಿದರು ಎಂದು ಹೇಳಲಾಗಿದೆ. ಈ ನಡುವೆ ರಷ್ಯಾ ಇದ್ದಕ್ಕಿದ್ದಂತೆ ಅಚ್ಚರಿಯ ಹೇಳಿಕೆ ಹೊರಡಿಸಿದ್ದು, ಮೊದಲ ಹಂತದ ಮಿಲಿಟರಿ ಕಾರ್ಯಾಚರಣೆ ಮುಗಿದಿದೆ. ಇದೀಗ ಪೂರ್ವ ಡೊನ್​ಬಾಸ್​ನ ವಿಮೋಚನೆಯ ಕಡೆಗೆ ಗಮನ ಹರಿಸುತ್ತೇವೆ ಎಂದು ರಷ್ಯಾ ಹೇಳಿದೆ.

ಈ ನಿರ್ಧಾರದ ಮೂಲಕ ರಷ್ಯಾ ಸೇನೆಯು ಉಕ್ರೇನ್ ಕಾರ್ಯಾಚರಣೆಯನ್ನು ಶೀಘ್ರ ಮುಗಿಸಬಹುದು ಎಂಬ ಸೂಚನೆ ನೀಡಿದೆ. ಪೂರ್ಣ ಪ್ರಮಾಣದಲ್ಲಿ ಉಕ್ರೇನ್ ವಿರುದ್ಧ ಜಯಗಳಿಸಲು ಆಗದಿದ್ದರೂ ಮುಖವುಳಿಸಿಕೊಳ್ಳುವ ತಳಹದಿಯಾಗಿ ಈ ಹೇಳಿಕೆಯನ್ನು ರಷ್ಯಾ ಹೊರಡಿಸಿದೆ. ಉಕ್ರೇನ್​ನ ಮಿಲಿಟರಿ ಬಲ ತಗ್ಗಿಸುವುದು ಮತ್ತು ಅಲ್ಲಿರುವ ನಾಝಿವಾದಿಗಳನ್ನು ಹೊರಹಾಕುವುದು ತಮ್ಮ ಉದ್ದೇಶ ಎಂದು ಪುಟಿನ್ ಯುದ್ಧಕ್ಕೆ ಮೊದಲು ಘೋಷಿಸಿದ್ದರು. ಆದರೆ ಈ ಹೇಳಿಕೆಯನ್ನು ಪಾಶ್ಚಿಮಾತ್ಯ ದೇಶಗಳು ತಳ್ಳಿ ಹಾಕಿದ್ದವು. ‘ಉಕ್ರೇನ್​ನಲ್ಲಿ ಝೆಲೆನ್​ಸ್ಕಿ ನೇತೃತ್ವದ ಸರ್ಕಾರ ಉರುಳಿಸಿ, ತಮ್ಮ ಕೈಗೊಂಬೆ ಸರ್ಕಾರ ಸ್ಥಾಪಿಸುವುದು ರಷ್ಯಾದ ಉದ್ದೇಶ’ ಎಂದು ವಿಶ್ಲೇಷಿಸಿದ್ದವು.

ಇದನ್ನೂ ಓದಿ: Russia Ukraine Conflict: ರಷ್ಯಾಕ್ಕೆ ಎಂದಿಗೂ ಶರಣಾಗುವುದಿಲ್ಲ ಎಂದ ಝೆಲೆನ್​ಸ್ಕಿ: ರಷ್ಯಾ ಉಕ್ರೇನ್ ಸಂಘರ್ಷದ 10 ಪ್ರಮುಖ ಬೆಳವಣಿಗೆಗಳಿವು

ಇದನ್ನೂ ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು