ನಾಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಇದೆ ಒಂದು ವಿಶೇಷತೆ; 2 ಹೆಲಿಕಾಪ್ಟರ್​ಗಳು ಸಿದ್ಧ

| Updated By: Lakshmi Hegde

Updated on: Aug 14, 2021 | 7:25 PM

Independence Day: ಎರಡೂ ಹೆಲಿಕಾಪ್ಟರ್​ಗಳು ಭಾರತೀಯ ವಾಯುಪಡೆಗೆ ಸೇರಿದವು. ಮೊದಲನೇ ಹೆಲಿಕಾಪ್ಟರ್​​ನ ಕಮಾಂಡರ್​ ಬಲ್​ದೇವ್​ ಸಿಂಗ್​ ಬಿಶತ್​ ಆಗಿದ್ದು ಎರಡನೇ ಹೆಲಿಕಾಪ್ಟರ್​ನ ಕ್ಯಾಪ್ಟನ್​ ವಿಂಗ್​ ಕಮಾಂಡರ್​ ನಿಖಿಲ್​ ಮೆಹ್ರೋತ್ರಾ.

ನಾಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಇದೆ ಒಂದು ವಿಶೇಷತೆ; 2 ಹೆಲಿಕಾಪ್ಟರ್​ಗಳು ಸಿದ್ಧ
ಕೆಂಪುಕೋಟೆ (ಚಿತ್ರಕೃಪೆ -ಪಿಟಿಐ)
Follow us on

ನಾಳೆ (ಆಗಸ್ಟ್​ 15) ಭಾರತದ ಪಾಲಿಗೆ ವಿಶೇಷ ದಿನ. 75ನೇ ಸ್ವಾತಂತ್ರ್ಯ ದಿನಾಚರಣೆ (Independence Day)ಯ ಹಿನ್ನೆಲೆಯಲ್ಲಿ ಮುಂಜಾನೆ ಪ್ರಧಾನಮಂತ್ರಿ ಮೋದಿಯವರು, ಐತಿಹಾಸಿಕ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ (Flag Hoisting). ನಂತರ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇವಿಷ್ಟು ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ದಿನದಂದು ನಡೆಯುತ್ತದೆ. ಆದರೆ ಈ ಬಾರಿ ಧ್ವಜಾರೋಹಣದ ಸಂದರ್ಭದಲ್ಲಿ ವಿಶೇಷತೆಯೊಂದು ಇದೆ. ಇಷ್ಟುವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ (Narendra Modi)ಯವರು ಧ್ವಜಾರೋಹಣ ಮಾಡುತ್ತಿದ್ದಂತೆ ಸ್ಥಳದಲ್ಲಿ ಹೂವಿನ ಎಸಳುಗಳ ಸುರಿಮಳೆಯಾಗಲಿದೆ.

ಈ ಬಾರಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಹೀಗೆ ಅಪಾರ ಪ್ರಮಾಣದಲ್ಲಿ ಹೂವಿನ ಎಸಳುಗಳನ್ನು ಮೇಲಿನಿಂದ ಉದಿರಿಸಲು ಎರಡು ಹೆಲಿಕಾಪ್ಟರ್​​ಗಳನ್ನು ರೆಡಿಯಾಗಿವೆ. ರಾಷ್ಟ್ರಧ್ವಜಾರೋಹಣ ಆಗುತ್ತಿದ್ದಂತೆ ಭಾರತೀಯ ವಾಯುಸೇನೆಯ ಎಂಐ-17 1ವಿ (Mi-17 1V) ಎರಡು ಹೆಲಿಕಾಪ್ಟರ್​​ಗಳು ಹೂವಿನ ಎಸಳುಗಳ ಸುರಿಮಳೆ ಸುರಿಸಲಿವೆ.

ಇದರಲ್ಲಿ ಮೊದಲನೇ ಹೆಲಿಕಾಪ್ಟರ್​​ನ ಕಮಾಂಡರ್​ ಬಲ್​ದೇವ್​ ಸಿಂಗ್​ ಬಿಶತ್​ ಆಗಿದ್ದು ಎರಡನೇ ಹೆಲಿಕಾಪ್ಟರ್​ನ ಕ್ಯಾಪ್ಟನ್​ ವಿಂಗ್​ ಕಮಾಂಡರ್​ ನಿಖಿಲ್​ ಮೆಹ್ರೋತ್ರಾ. ರಾಷ್ಟ್ರಧ್ವಜಾರೋಹಣವಾಗುತ್ತಿದ್ದಂತೆ ಇವೆರಡೂ ಹೆಲಿಕಾಪ್ಟರ್​ಗಳಿಂದ ಹೂವಿನ ಸಿಂಪಡಣೆ ಆಗಲಿದ್ದು, ನಂತರ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡುವರು. ಭಾಷಣದ ಬಳಿಕ ನ್ಯಾಷನಲ್​ ಕೆಡೆಟ್ಸ್​ ಕಾರ್ಪ್ಸ್(NCC)​ ರಾಷ್ಟ್ರಗೀತೆ ಹಾಡಲಿದೆ. ಭೂ, ನೌಕಾ ಮತ್ತು ವಾಯುಸೇನೆಯ ವಿವಿಧ ಶಾಲೆಗಳಿಂದ ಒಟ್ಟು 500 ಕೆಡೆಟ್​ಗಳು ಈ ಹೊತ್ತಲ್ಲಿ ಪಾಲ್ಗೊಳ್ಳಲಿವೆ.

ಒಲಿಂಪಿಕ್ಸ್​ ಅಥ್ಲೀಟ್​ಗಳು ಭಾಗಿ
ಇನ್ನು ಈ ಬಾರಿ ಒಲಿಂಪಿಕ್ಸ್​ನಲ್ಲಿ ಭಾರತ ಅಮೋಘ ಸಾಧನೆ ಮಾಡಿದ್ದು, ಅದರಲ್ಲಿ ಪಾಲ್ಗೊಂಡ ಆಟಗಾರರನ್ನು ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನಿಸಲಾಗಿದೆ. ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಸೇರಿ 32 ಅಥ್ಲೀಟ್​ಗಳು ಪಾಲ್ಗೊಳ್ಳುವರು.

ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ
75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಎನ್​ಎಸ್​ಜಿ ಸ್ನಿಪರ್​ಗಳು ಸೇರಿ, ವಿವಿಧ ಭದ್ರತಾ ಪಡೆಗಳ ಕಮಾಂಡೋಗಳನ್ನು ನೇಮಿಸಲಾಗಿದೆ. ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಜನವರಿ 26ರಂದು ರೈತರ ಹೋರಾಟ ಕೆಂಪುಕೋಟೆ ಬಳಿ ಹಿಂಸಾಚಾರ ಸೃಷ್ಟಿಸಿತ್ತು. ಕೆಂಪುಕೋಟೆಯ ಮೇಲೆ ಭಾರತದ ಧ್ವಜದೊಟ್ಟಿಗೆ ಸಿಖ್​ ಧ್ವಜ ಹಾರಿಸಲಾಗಿತ್ತು.

ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ; ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಗೋವಿಂದ ಕಾರಜೋಳ ಮಾತು

ಮನನೊಂದು ಮುಂದಿನ ಸೀಸನ್​ನಿಂದ ಜಡ್ಜ್ ಆಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟ ಗಾಯಕ!

Published On - 6:39 pm, Sat, 14 August 21