ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ; ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಗೋವಿಂದ ಕಾರಜೋಳ ಮಾತು
69 ವರ್ಷಗಳ ಹಿಂದೆ ಭದ್ರಾ ಜಲಾಶಯ ನಿರ್ಮಿಸಲಾಗಿದೆ. 33 ವರ್ಷ ಮಾತ್ರ ಭದ್ರಾ ಜಲಾಶಯ ಭರ್ತಿಯಾಗಿದೆ. ಈ ವರ್ಷ ಜುಲೈನಲ್ಲೇ ಭದ್ರಾ ಡ್ಯಾಂ ತುಂಬಿರುವುದು ವಿಶೇಷವಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
ಶಿವಮೊಗ್ಗ: ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ. ಆದರೆ, ತಮಿಳುನಾಡು ಸರ್ಕಾರ ವಿನಾಕಾರಣ ಕ್ಯಾತೆ ತೆಗೆಯುತ್ತಿದೆ. ನಮ್ಮ ಪಾಲಿನ ಯೋಜನೆ ವಿಚಾರದಲ್ಲಿ ಮೂಗು ತೂರಿಸುತ್ತಿದೆ ಎಂದು ಶಿವಮೊಗ್ಗದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು (ಆಗಸ್ಟ್ 14) ಹೇಳಿಕೆ ನೀಡಿದ್ದಾರೆ. ನಮ್ಮ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಅಪ್ಪಣೆ ಬೇಕಿಲ್ಲ. ಜಲವಿದ್ಯುತ್ ಉತ್ಪಾದನೆಗೆ ಬಳಸಿದ ಬಳಿಕ ಮತ್ತೆ ನದಿಗೆ ಸೇರುತ್ತೆ ಎಂದು ತಿಳಿಸಿದ್ದಾರೆ. ಯೋಜನೆಗೆ ತಮಿಳುನಾಡು ಬಿಜೆಪಿಯಿಂದ ವಿರೋಧ ವಿಚಾರವಾಗಿ ಮಾತನಾಡಿದ ಅವರು, ರಾಜಕಾರಣ ಆಯಾ ರಾಜ್ಯಗಳಲ್ಲಿ ಭಿನ್ನಾವಾಗಿರುತ್ತೆ. ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಪ್ರತಿಭಟನೆ, ವಿರೋಧ ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜಲಸಂಪನ್ಮೂಲ ಸಚಿವನಾದ ನಂತರ ಮೊದಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಬೊಮ್ಮಾಯಿ ಸಂಪುಟದಲ್ಲಿ ಕೆಲವು ಕಳಂಕಿತರಿಗೆ ಸ್ಥಾನ ವಿಚಾರವಾಗಿಯೂ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಆಪಾದನೆಗಳು ಬರುವುದು ಸಹಜ. ಆರೋಪ ಬಂದ ತಕ್ಷಣ ಅವರು ಅಪರಾಧಿಗಳಾಗುವುದಿಲ್ಲ. ಅಪರಾಧಿ ಹೌದೋ ಅಲ್ಲವೋ ಎಂದು ಮನವರಿಕೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
69 ವರ್ಷಗಳ ಹಿಂದೆ ಭದ್ರಾ ಜಲಾಶಯ ನಿರ್ಮಿಸಲಾಗಿದೆ. 33 ವರ್ಷ ಮಾತ್ರ ಭದ್ರಾ ಜಲಾಶಯ ಭರ್ತಿಯಾಗಿದೆ. ಈ ವರ್ಷ ಜುಲೈನಲ್ಲೇ ಭದ್ರಾ ಡ್ಯಾಂ ತುಂಬಿರುವುದು ವಿಶೇಷವಾಗಿದೆ. ನೀರಾವರಿ ಯೋಜನೆಗಳಿಗೆ ಲಕ್ಷಾಂತರ ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ. ಹೆಚ್ಚು ನೀರು ಬಳಸುವ ರೈತರು ಕರ ಪಾವತಿಸಲು ಮುಂದಾಗಬೇಕು. ಭತ್ತ, ಕಬ್ಬು ಬೆಳೆಯುವ ರೈತರು ನೀರಿನ ಕರ ಪಾವತಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ 4900 ಕೋಟಿ ವೆಚ್ಚವಾಗಿದೆ. 21,500 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ. ಕೇಂದ್ರ ಸರ್ಕಾರ ಇಷ್ಟರಲ್ಲೇ ಯೋಜನೆ ಘೋಷಿಸಲಿದೆ ಎಂದು ಭದ್ರಾವತಿಯಲ್ಲಿ ಜಲಸಂಪನ್ಮೂಲ ಸಚಿವ ಕಾರಜೋಳ ಹೇಳಿಕೆ ನೀಡಿದ್ದಾರೆ.
ಭರ್ತಿಯಾದ ಭದ್ರಾ ಜಲಾಶಯಕ್ಕೆ ಕಾರಜೋಳ ಬಾಗಿನ ಅರ್ಪಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಭರ್ತಿಯಾಗಿದೆ. ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ಕಾರಳಜೋಳರಿಂದ ಬಾಗಿನ ಅರ್ಪಣೆ ಮಾಡಲಾಗಿದೆ. ಸಚಿವ ಭೈರತಿ ಬಸವರಾಜ್, ಸಂಸದ ಬಿ.ವೈ. ರಾಘವೇಂದ್ರ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಡ್ಯಾಂನಿಂದ ನೀರು ಬಿಡಿ. ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬೇಡ ಎಂದು ಶನಿವಾರ ಭದ್ರಾವತಿಯಲ್ಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ನಿರ್ಧರಿಸಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬಿಡುಗಡೆ ಮಾಡಬೇಕು. ಈ ಯೋಜನೆಗೆ ಭದ್ರಾ ಡ್ಯಾಂನಿಂದ ನೀರು ಬಿಡಬಾರದು. ಭದ್ರಾ ಡ್ಯಾಂನಿಂದ ಶಿವಮೊಗ್ಗ ದಾವಣಗೆರೆ ಮುಂದೆ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಆಸರೆ ಆಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳಗೆ ದಾವಣಗೆರೆ ಸಂಸದ ಜಿ.ಎಂ ಸಿದ್ಧೇಶ್ವರ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ: ಗೋವಿಂದ ಕಾರಜೋಳ