ದೆಹಲಿಯಲ್ಲಿ ಯುವಕರ ನಡುವೆ ಮಾರಾಮಾರಿ; ಇಬ್ಬರು ಸಾವು, ಹಲವರಿಗೆ ಗಂಭೀರ ಗಾಯ
ದೆಹಲಿಯಲ್ಲಿ ಯುವಕರ ನಡುವೆ ಗಲಾಟೆ ನಡೆದಿದ್ದು ಚಾಕು ಇರಿತದಿಂದ ಇಬ್ಬರು ಮೃತಪಟ್ಟಿದ್ದಾರೆ. ಹಾಗೂ ಕೆಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೆಹಲಿ: ರಾಜ್ಯ ರಾಜಧಾನಿ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಬುಧವಾರ ಯುವಕರ ನಡುವೆ ಮಾರಾಮಾರಿಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರಿಗೆ ಗಾಯಗಳಾಗಿರುವ ಭಯಾನಕ ಘಟನೆ ನಡೆದಿದೆ. ದೆಹಲಿ ಪೊಲೀಸರಿಗೆ ಬುಧವಾರ ಮಧ್ಯಾಹ್ನ 1:36, 1:42 ಮತ್ತು 1:47 ಗಂಟೆಗೆ ಗಲಾಟೆ ಸಂಬಂಧ ನಿರಂತರ ಕರೆಗಳು ಬಂದಿವೆ. ಜಗಳ, ಚೂರಿ ಇರಿತ ಮತ್ತು ವ್ಯಕ್ತಿಯ ಸಾವಿನ ಕುರಿತು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮುಂಡ್ಕಾ ಪ್ರದೇಶದಿಂದ ಬಂದ ಕರೆಗಳನ್ನು ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿದ್ದು ಘಟನೆ ಬಯಲಾಗಿದೆ.
ಫ್ರೆಂಡ್ಸ್ ಎನ್‌ಕ್ಲೇವ್ ಮುಂಡ್ಕಾದ ಬೀದಿ ನಂ 14ರ ನಿವಾಸಿಗಳಾದ ಸೋನು ಮತ್ತು ಅಭಿಷೇಕ್ ಎಂಬುವವರ ನಡುವೆ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಿಷೇಕ್ ಮತ್ತು ಅವನ ಸ್ನೇಹಿತರು ಸೋನು ಮೇಲೆ ಹಲ್ಲೆ ನಡೆಸಿ ಚಾಕು ಇರಿದಿದ್ದಾರೆ. ಮತ್ತು ಹಲ್ಲೆಯನ್ನು ತಡೆಯಲು ಬಂದವರ ಮೇಲೂ ಹಲ್ಲೆ ನಡೆದಿದ್ದು ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಇದೇ ವೇಳೆ ಅಭಿಷೇಕ್ಗೂ ಚಾಕುವಿನಿಂದ ಇರಿಯಲಾಗಿದೆ.
ಒಟ್ಟು ಏಳು ಜನರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ಸೋನು ಮತ್ತು ನವೀನ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮತ್ತೊಂದೆಡೆ ಅಭಿಷೇಕ್ ಮತ್ತು ಇನ್ನೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮೂವರು ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕ್ರೈಂ ಮತ್ತು ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಾರಾಮಾರಿ ಮಾಡಿಕೊಂಡು ಆಸ್ಪತ್ರೆ ಸೇರಿರುವ ಯುವಕರು ಮುಂಡ್ಕಾ ಪ್ರದೇಶದ ನಮ್ಕೀನ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೂಡ ಯುವಕರ ನಡುವೆ ಗಲಾಟೆಯಾಗಲು ಕಾರಣ ಇಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ