Kashmir Conflict: ಕಾಶ್ಮೀರ ಕುರಿತ ಪಾಕಿಸ್ತಾನದ ಹೇಳಿಕೆ ಪ್ರತಿಕ್ರಿಯೆಗೂ ಯೋಗ್ಯವಲ್ಲದ್ದು; ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿ
ಮಹಿಳೆ, ಶಾಂತಿ ಹಾಗೂ ಭದ್ರತೆ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೀಡಿರುವ ಹೇಳಿಕೆಯು ಪ್ರತಿಕ್ರಿಯೆ ನೀಡಲೂ ಯೋಗ್ಯವಲ್ಲದ್ದು ಎಂದು ಭಾರತ ತಿರುಗೇಟು ನೀಡಿದೆ.
ವಿಶ್ವಸಂಸ್ಥೆ: ಮಹಿಳೆ, ಶಾಂತಿ ಹಾಗೂ ಭದ್ರತೆ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (Security Council) ಸಭೆಯಲ್ಲಿ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ (Pakistan) ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari) ನೀಡಿರುವ ಹೇಳಿಕೆಯು ಪ್ರತಿಕ್ರಿಯೆ ನೀಡಲೂ ಯೋಗ್ಯವಲ್ಲದ್ದು ಎಂದು ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನದ್ದು ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರ ಎಂದು ಭಾರತ ಹೇಳಿದೆ. ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ (Ruchira Kamboj) ಹೇಳಿದ್ದಾರೆ. ಸಭೆಯಲ್ಲಿ ಭಾಷಣ ಮಾಡಿದ ಅವರು ಕೊನೆಯಲ್ಲಿ, ‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರತಿನಿಧಿ ಮಾಡಿದ ಕ್ಷುಲ್ಲಕ, ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಟೀಕೆಗಳನ್ನು ಈ ಮೂಲಕ ಅಲ್ಲಗಳೆಯುತ್ತೇನೆ’ ಎಂದು ಹೇಳಿದ್ದಾರೆ.
ಮಹಿಳೆ, ಶಾಂತಿ ಹಾಗೂ ಭದ್ರತೆ ವಿಚಾರವಾಗಿ ನಡೆದ ಮುಕ್ತ ಸಭದೆಯಲ್ಲಿ ಮಾತನಾಡಿದ ರುಚಿರಾ ಕಾಂಬೋಜ್, ಇಂತಹ ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರಗಳು ಪ್ರತಿಕ್ರಿಯಿಸಲು ಅನರ್ಹವೆಂದು ನನ್ನ ನಿಯೋಗವು ಭಾವಿಸುತ್ತದೆ. ಬದಲಿಗೆ, ನಮ್ಮ ಗಮನವು ಯಾವಾಗಲೂ ಧನಾತ್ಮಕವಾಗಿರಬೇಕು ಎಂದು ಭಾವಿಸುತ್ತದೆ. ಮಹಿಳೆಯರು, ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಕಾರ್ಯಸೂಚಿಯ ಸಂಪೂರ್ಣ ಅನುಷ್ಠಾನವನ್ನು ಇನ್ನಷ್ಟು ತ್ವರಿತಗೊಳಿಸುವಲ್ಲಿ ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸುವುದು ಇಂದಿನ ಸಭೆಯ ಮುಖ್ಯ ವಿಷಯವಾಗಿದೆ. ನಾವು ಚರ್ಚೆಯ ವಿಷಯವನ್ನು ಮತ್ತು ಸಮಯದ ಮಹತ್ವವನ್ನು ಗೌರವಿಸುತ್ತೇವೆ. ಹಾಗಾಗಿ, ನಮ್ಮ ಗಮನವು ಚರ್ಚೆಯ ಮುಖ್ಯ ವಿಷಯದ ಮೇಲೆಯೇ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದ್ದಾರೆ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರು ಅನವಶ್ಯಕವಾಗಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ರುಚಿರಾ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Bill Gates: ಭಾರತದ ಪ್ರವಾಸದ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಸುರಿಸಿದ ವಿಶ್ವದ ಶ್ರೀಮಂತ ವ್ಯಕ್ತಿ ಬಿಲ್ಗೇಟ್ಸ್
ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿವೆ ಮತ್ತು ಯಾವಾಗಲೂ ಹಾಗೆಯೇ ಇರುತ್ತವೆ ಎಂದು ಈಗಾಗಲೇ ಹಲವು ಬಾರಿ ಪಾಕಿಸ್ತಾನಕ್ಕೆ ತಿಳಿಸಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯೂ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಹಲವು ವೇದಿಕೆಗಳಲ್ಲಿ ಈ ವಿಚಾರವನ್ನು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಿಳಿಸಲಾಗಿದೆ. ಆದಾಗ್ಯೂ, ಪಾಕಿಸ್ತಾನವು ಅದೇ ವಿಷಯವನ್ನು ಮತ್ತೆ ಮತ್ತೆ ಕೆದಕುವ ಮೂಲಕ ಮುಖಭಂಗ ಅನುಭವಿಸುತ್ತಿದೆ.
ಭಯೋತ್ಪಾದನೆ ಪೋಷಿಸುವ ದೇಶ ಪಾಕಿಸ್ತಾನ
ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸಿ ಆಶ್ರಯ ನೀಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹೇಳಿಕೆ ಜಗಪ್ರೀತ್ ಕೌರ್ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ಇಂತಹ ನೀತಿಗಳು ನಮ್ಮ ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದ ನಾಗರಿಕರ ಬದುಕುವ ಹಕ್ಕು ಕಸಿದುಕೊಳ್ಳುತ್ತಿದೆ. ಪಾಕಿಸ್ತಾನ ಮಾನವ ಹಕ್ಕುಗಳ ಉಲ್ಲಂಘನೆಗೆ ನೇರ ಉದಾಹರಣೆಯಾಗಿದೆ. ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುತ್ತಾ ಬಂದಿದ್ದು, ತನ್ನದೇ ಆದ ದುರುದ್ದೇಶಪೂರಿತ ನೀತಿಗಳಿಗೆ ಬಲಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:38 pm, Wed, 8 March 23