ಪ್ರವಾದಿ(Prophet muhammad) ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ(Nupur Sharma) ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಬರ್ಬರ ಹತ್ಯೆಗೀಡಾದ ಕನ್ಹಯ್ಯಾ ಲಾಲ್‌ರ ( Kanhaiya Lal) ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಇಂದು(ಬುಧವಾರ) ಬೆಳಗ್ಗೆ 11 ಗಂಟೆಗೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬಿಗಿ ಬಂದೋಬಸ್ತ್ ನಡುವೆ ಮೃತದೇಹವನ್ನು ತರಲಾಗಿದ್ದು ನೂರಾರು ಮಂದಿ ಜನರು ಮನೆ ಬಳಿ ನೆರೆದಿದ್ದರು. ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸುವ ಕೂಗು ಅಲ್ಲಿ ಕೇಳಿ ಬಂತು. ಮೃತದೇಹ ಮನೆಗೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕನ್ಹಯ್ಯಾ ಅವರ ಮಗ ಅಳುತ್ತಿದ್ದುದನ್ನು ನೋಡಿ ಎಲ್ಲರೂ ಕಣ್ಣೀರಾಗುತ್ತಿದ್ದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಕನ್ಹಯ್ಯಾ ಅಮರ್ ರಹೇ ಎಂದು ಘೋಷಣೆ ಕೂಗುತ್ತಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಭಾಗಿ
ಗೋವರ್ಧನ ವಿಲಾಸದಿಂದ ಅಂತಿಮ ಯಾತ್ರೆ ಹೊರಟಿದ್ದು ಅಶೋಕ್ ನಗರದ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ. ಕಾಲ್ನಡಿಗೆಯ ಹೊರತಾಗಿ ಅನೇಕರು ಬೈಕ್ ಹಾಗೂ ಇತರ ವಾಹನಗಳಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು. ನಗರ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಕೂಡ ಶವಾಗಾರಕ್ಕೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ.
Published On - 1:29 pm, Wed, 29 June 22