Udaipur Murder: ಉದಯ್ಪುರದ ಬರ್ಬರ ಕೊಲೆ ಪೂರ್ವ ನಿಯೋಜಿತ, ಜೂನ್ 17ರ ವಿಡಿಯೊ ಬಹಿರಂಗ
ಕೊಲೆಗೆ 11 ದಿನ ಮೊದಲೇ, ಅಂದರೆ ಜೂನ್ 17ರಂದೇ ಕೊಲೆಗಡುಕ ಮೊಹಮದ್ ರಿಯಾಜ್ ಅಖ್ತಾರಿ ತನ್ನ ಉದ್ದೇಶವನ್ನು ಬಹಿರಂಗಪಡಿಸಿದ್ದ
ದೆಹಲಿ: ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ರಾಜಸ್ಥಾನದ ಉದಯ್ಪುರ್ ನಗರದ ನಿವಾಸಿ ಟೈಲರ್ ಕನ್ಹಯ್ಯಲಾಲ್ ಹತ್ಯೆಗೆ ಜೂನ್ 17ರಂದೇ ಭೂಮಿಕೆ ಸಿದ್ಧವಾಗಿತ್ತು ಎನ್ನುವ ಆಘಾತಕಾರಿ ವಿಚಾರ ಇದೀಗ ಬಹಿರಂಗವಾಗಿದೆ. ಕೊಲೆಗೆ 11 ದಿನ ಮೊದಲೇ, ಅಂದರೆ ಜೂನ್ 17ರಂದೇ ಕೊಲೆಗಡುಕ ಮೊಹಮದ್ ರಿಯಾಜ್ ಅಖ್ತಾರಿ ತನ್ನ ಉದ್ದೇಶವನ್ನು ಬಹಿರಂಗಪಡಿಸಿದ್ದ. ಅಷ್ಟೇ ಅಲ್ಲದೆ, ಅತ್ಯಂತ ಹೆಮ್ಮೆಯಿಂದ ತನ್ನ ಉದ್ದೇಶಿತ ಕೃತ್ಯಕ್ಕೆ ವಿವರಣೆಯನ್ನೂ ಕೊಟ್ಟುಕೊಂಡಿದ್ದ. ನಾನು ಮೊದಲ ಕೊಲೆ ಮಾಡಿದ ನಂತರ ಇನ್ನಷ್ಟು ಜನರನ್ನು ಇದೇ ರೀತಿ ಕೊಂದುಹಾಕಿ ಎಂದು ಕರೆ ನೀಡಿದ್ದ.
ಜೂನ್ 17ರಂದು ಕ್ರೀಮ್ ಕುರ್ತಾ ಮತ್ತು ಹಸಿರು ರುಮಾಲಿನೊಂದಿಗೆ ಕ್ಯಾಮೆರಾ ಎದುರು ಬಂದಿದ್ದ ಅಖ್ತಾರಿ 2.33 ನಿಮಿಷಗಳ ವಿಡಿಯೊ ರೆಕಾರ್ಡ್ ಮಾಡಿದ್ದ. ತನ್ನ ಹೆಸರು, ದಿನಾಂಕ ಮತ್ತು ತನ್ನ ವಾಸಸ್ಥಳದ ವಿವರಗಳೊಂದಿಗೆ ವಿಡಿಯೊ ಚಿತ್ರೀಕರಿಸಿದ್ದ. ಇಸ್ಲಾಂ ಅವಹೇಳನ ಮಾಡಿರುವವರ ತಲೆ ತೆಗೆಯುವುದಾಗಿ ವಿಡಿಯೊದಲ್ಲಿ ಭರವಸೆಯನ್ನೂ ಕೊಟ್ಟಿದ್ದ.
ಉದಯಪುರದ ಸೆಕ್ಟರ್ 11ರಲ್ಲಿ ವಾಸವಿರುವ ಧರ್ಮನಿಂದಕರ ತಲೆಯನ್ನು ನಾನು ತೆಗೆಯುತ್ತೇನೆ. ಉಳಿದವರು ಉಳಿದವರು ಅದೇ ಮೇಲ್ಪಂಕ್ತಿ ಅನುಸರಿಸಬೇಕು ಎಂದು ರಿಯಾಜ್ ತನ್ನ ವಿಡಿಯೊದಲ್ಲಿ ಕರೆ ನೀಡಿದ್ದ. ಮೃತ ಕನ್ಹಯ್ಯ ಲಾಲ್ ಸಹ ಇದೇ ಸೆಕ್ಟರ್ 11ರಲ್ಲಿ ವಾಸವಾಗಿದ್ದರು. ನನ್ನ ಕುಟುಂಬಕ್ಕೆ ಅಥವಾ ನನ್ನ ವ್ಯಾಪಾರಕ್ಕೆ ಏನಾಗುತ್ತದೆ ಎನ್ನುವ ಬಗ್ಗೆ ಯಾರೂ ಚಿಂತಿಸುವ ಅಗತ್ಯವಿಲ್ಲ. ನನ್ನದೆನ್ನುವ ಎಲ್ಲವನ್ನೂ ರಸೂಲ್-ಎ-ಪಾಕ್ (ಪ್ರವಾದಿ) ಅವರಿಗೆ ಸಮರ್ಪಿಸಲು ನಾನು ಸಿದ್ಧನಿದ್ದೇನೆ ಎಂದು ಅಖ್ತಾರಿ ಹೇಳಿದ್ದ.
ಇತರರು ಸಹ ತನ್ನ ಮಾದರಿಯನ್ನು ಯಾವುದೇ ಹೆದರಿಕೆಯಿಲ್ಲದೆ ಅನುಸರಿಸಬೇಕು. ಒಂದು ವೇಳೆ ಸಾವು ಬಂದರೂ ನಾನು ಹೆದರುವುದಿಲ್ಲ. ಸಾವು ಎನ್ನುವುದು ಸ್ವರ್ಗವಿದ್ದಂತೆ. ಜೈಲಿಗೆ ಹೋದರೂ ಪರವಾಗಿಲ್ಲ. ಯಾವುದೇ ಚಿಂತೆಯಿಲ್ಲ ಎಂದು ಹೇಳಿದ್ದ. ಹಿಂದೂಗಳೊಂದಿಗೆ ಶಾಂತಿ ಮತ್ತು ಸೌಹಾರ್ದದಿಂದ ವರ್ತಿಸಬೇಕು ಎನ್ನುವ ಮುಸ್ಲಿಮ್ ಸಮುದಾಯದ ಹಿರಿಯ ಬಗ್ಗೆಯೂ ಅಖ್ತಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ. ಮುಸ್ಲಿಮೇತರರ ಬಗ್ಗೆ ಮಾತನಾಡಲು ನೀವು ಹೆದರುತ್ತೀರಿ. ಹಸಿರು ಬಳೆ ತೊಟ್ಟು ಮನೆಗಳಲ್ಲಿಯೇ ಇರಿ ಎಂದು ಹೇಳಿದ್ದ.
ರಿಯಾಜ್ ಮೂಲತಃ ಬಿಲ್ವಾರಾದವನು. 2002ರಲ್ಲಿ ದುಬೈಗೆ ತೆರಳಿದ್ದ. ನಂತರ ಹಿಂದಿರುಗಿರಲಿಲ್ಲ ಎಂದು ಸಂಬಂಧಿಕರೊಬ್ಬರು ತಿಳಿಸಿದರು.
ಕನ್ಹಯ್ಯಲಾಲ್ ಕೊಲೆಯ ನಂತರ ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಗೌಸ್ ಮೊಹಮದ್ ಓರ್ವ ದಿನಸಿ ವ್ಯಾಪಾರಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊಲೆಯ ವಿಡಿಯೊ ಮಾಡಿದ್ದ ಗೌಸ್ ಮೊಹಮದ್ ನಂತರ ಅದೇ ವಿಡಿಯೊದಲ್ಲಿ ಚಾಕುವಿನೊಂದಿಗೆ ಕಾಣಿಸಿಕೊಂಡಿದ್ದ. ಘಟನೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ (ಜೂನ್ 28) ಧಾನ್ ಮಂಡಿ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಒಬ್ಬರನ್ನು ರಾಜಸ್ಥಾನ ಸರ್ಕಾರ ಅಮಾನತು ಮಾಡಿದೆ.