ಪ್ರವಾದಿ ವಿರುದ್ಧ ಹೇಳಿಕೆ: ಬಿಜೆಪಿಯ ಉಚ್ಛಾಟಿತ ನಾಯಕ ನವೀನ್ ಕುಮಾರ್ ಜಿಂದಾಲ್ಗೆ ಕೊಲೆ ಬೆದರಿಕೆ
ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ಕಾರಣಕ್ಕೆ ಉದಯಪುರದಲ್ಲಿ ಟೈಲರ್ ಶಿರಚ್ಛೇದ ಮಾಡಿದ ಬೆನ್ನಲ್ಲೇ ಬಿಜೆಪಿಯ ಉಚ್ಛಾಟಿತ ನಾಯಕ ನವೀನ್ ಕುಮಾರ್ ಜಿಂದಾಲ್ಗೆ ಕೊಲೆ ಬೆದರಿಕೆ ಬಂದಿರುವ ಕುರಿತು ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆ.
ನವದೆಹಲಿ: ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ಕಾರಣಕ್ಕೆ ಉದಯಪುರದಲ್ಲಿ ಟೈಲರ್ ಶಿರಚ್ಛೇದ ಮಾಡಿದ ಬೆನ್ನಲ್ಲೇ ಬಿಜೆಪಿಯ ಉಚ್ಛಾಟಿತ ನಾಯಕ ನವೀನ್ ಕುಮಾರ್ ಜಿಂದಾಲ್ಗೆ ಕೊಲೆ ಬೆದರಿಕೆ ಬಂದಿರುವ ಕುರಿತು ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆ.
ನವೀನ್ ಕುಮಾರ್ ಜಿಂದಾಲ್ ಅವರು ಬುಧವಾರ ಬೆಳಗ್ಗೆ ಟ್ವೀಟ್ ಮಾಡಿ, ‘ಇಂದು ಬೆಳಗ್ಗೆ 6:43 ರ ಸುಮಾರಿಗೆ ನನಗೆ ಮೂರು ಇ-ಮೇಲ್‌ಗಳು ಬಂದಿವೆ, ಉದಯಪುರದಲ್ಲಿ ಸಹೋದರ ಕನ್ಹಯ್ಯಾ ಲಾಲ್ ಅವರ ಕತ್ತು ಕತ್ತರಿಸಿದ ವೀಡಿಯೊವನ್ನು ಲಗತ್ತಿಸಲಾಗಿದೆ, ನನ್ನನ್ನು ಮತ್ತು ನನ್ನ ಕುಟುಂಬಕ್ಕೂ ಕತ್ತರಿಸುವುದಾಗಿ ಬೆದರಿಕೆ ಹಾಕಿದೆ’ ಎಂದು ಹೇಳಿಕೊಂಡಿದ್ದಾರೆ.
ಕೊಲೆ ಬೆದರಿಕೆಯ ಇ-ಮೇಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. ಉದಯಪುರ ಘಟನೆಯ ವೀಡಿಯೋವನ್ನು ಸಹ ಅವರಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಮಂಗಳವಾರ, ರಾಜಸ್ಥಾನದ ಉದಯಪುರದಲ್ಲಿ ವೃತ್ತಿಯಲ್ಲಿ ಟ್ರೇಲರ್ ಆಗಿದ್ದ ಕನ್ಹಯ್ಯಾ ಲಾಲ್ ಅವರನ್ನು ಕ್ಯಾಮೆರಾದ ಎದುರೇ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಅದರ ವಿಡಿಯೋವನ್ನು ಹಂತಕರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು. ಈ ಘಟನೆಯ ನಂತರ, ಉದಯಪುರ ಸೇರಿದಂತೆ ಇಡೀ ರಾಜಸ್ಥಾನದಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ ಮತ್ತು 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆ ಆರಂಭವಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ, ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ವಿಷಯವಾಗಿ ನವೀನ್ ಕುಮಾರ್ ಜಿಂದಾಲ್ ಅವರು ಈ ಹಿಂದೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ ಬಿಜೆಪಿ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು. ನವೀನ್ ಕುಮಾರ್ ಜಿಂದಾಲ್ ವಿರುದ್ಧ ಪುಣೆ ಮತ್ತು ದೆಹಲಿಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.